ಹೊಸಮಜಲು–ಕೌಕ್ರಾಡಿಯ ಅಶ್ವತ್ಥ ಗೆಳೆಯರ ಬಳಗದ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ
ನೆಲ್ಯಾಡಿ: ಗ್ರಾಮೀಣ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಹೊಸಮಜಲು–ಕೌಕ್ರಾಡಿಯ ಅಶ್ವತ್ಥ ಗೆಳೆಯರ ಬಳಗದ ವತಿಯಿಂದ ಖರೀದಿಸಲಾದ ಆಂಬ್ಯುಲೆನ್ಸ್ ಸೇವೆಗೆ ಭಾನುವಾರ ಚಾಲನೆ ನೀಡಲಾಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಆಂಬ್ಯುಲೆನ್ಸ್ನ ಕೀ ಹಸ್ತಾಂತರಿಸುವ ಮೂಲಕ ಸೇವೆಯನ್ನು ಲೋಕಾರ್ಪಣೆಗೊಳಿಸಿದರು. ಅಶ್ವತ್ಥ ಗೆಳೆಯರ ಬಳಗದ ಅಧ್ಯಕ್ಷ ರೋಷನ್ ಬಿ.ಜೆ. ಅವರು ತೆಂಗಿನಕಾಯಿ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ, ಯುವಕರ ಸಂಘಟನೆಗಳು ಸಾಮಾನ್ಯವಾಗಿ ನಡೆಸುವ ಚಟುವಟಿಕೆಗಳಿಗಿಂತ ವಿಭಿನ್ನವಾಗಿ ಅಶ್ವತ್ಥ ಗೆಳೆಯರ ಬಳಗವು ಸಮಾಜಕ್ಕೆ ಅತ್ಯಂತ ಉಪಯುಕ್ತವಾದ ಕಾರ್ಯವನ್ನು ಕೈಗೊಂಡಿದೆ ಎಂದು ಶ್ಲಾಘಿಸಿದರು. ವಿದ್ಯಾರ್ಥಿಗಳು, ಮಕ್ಕಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವವರು ಸಂಘಟನೆಯ ಸದಸ್ಯರಾಗಿ ಒಗ್ಗಟ್ಟಿನಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆಯ ಮೂಲಕ ಜನರ ಪ್ರಾಣ ಉಳಿಸುವಲ್ಲಿ ಸಂಘಟನೆ ಪ್ರಮುಖ ಪಾತ್ರ ವಹಿಸಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳು ಸಂಘಟನೆಯಿಂದ ಮೂಡಿಬರಲಿ. ಜಿಲ್ಲೆ, ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ಅಶ್ವತ್ಥ ಗೆಳೆಯರ ಬಳಗವು ಉತ್ತಮ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿ ಎಂದು ಅವರು ಆಶಿಸಿದರು.
ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಮುರಳೀಧರ ಕೆ.ವೈ. ಮಾತನಾಡಿ, ಅಶ್ವತ್ಥ ಗೆಳೆಯರ ಬಳಗವು ಉತ್ತಮ ಗುಣಮಟ್ಟದ ಆಂಬ್ಯುಲೆನ್ಸ್ ಅನ್ನು ಸಮಾಜಕ್ಕೆ ಸಮರ್ಪಿಸಿರುವುದು ಸಂತಸದ ವಿಚಾರ ಎಂದರು. ಈಗಾಗಲೇ ಹಲವು ಆಂಬ್ಯುಲೆನ್ಸ್ಗಳು ಸೇವೆಯಲ್ಲಿದ್ದರೂ ರಸ್ತೆ ಅಗಲೀಕರಣ ಹಾಗೂ ಹೆಚ್ಚುತ್ತಿರುವ ವಾಹನ ಸಂಚಾರದ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಯ ಅಗತ್ಯ ಮತ್ತಷ್ಟು ಹೆಚ್ಚಾಗಿದೆ. ಸುತ್ತಮುತ್ತಲಿನ ಜನರಿಗೆ ಅತ್ಯಂತ ಉಪಯುಕ್ತವಾಗುವಂತಹ ಸೇವೆಯನ್ನು ಸಂಘಟನೆ ಆರಂಭಿಸಿದ್ದು, ಈ ಸಮಾಜಮುಖಿ ಕಾರ್ಯಕ್ಕೆ ಶುಭ ಹಾರೈಸುವುದಾಗಿ ತಿಳಿಸಿದರು.
ಕೌಕ್ರಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಎಂ.ಕೆ. ಇಬ್ರಾಹಿಂ ಮಾತನಾಡಿ, ಅಶ್ವತ್ಥ ಗೆಳೆಯರ ಬಳಗ ಆರಂಭವಾದ ದಿನದಿಂದಲೂ ಅದರ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಿದ್ದೇನೆ. ಸಂಘಟನೆಯ ಸದಸ್ಯರು ತಮ್ಮ ದುಡಿಮೆಯ ಹಣದ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಹಲವಾರು ವರ್ಷಗಳಿಂದ ಗಣೇಶೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಿರುವ ಅಶ್ವತ್ಥ ಗೆಳೆಯರ ಬಳಗ ಇದೀಗ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿರುವುದು ಸಂಘಟನೆಯ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸುಳ್ಯ ಮಂಡಲದ ಕಾರ್ಯದರ್ಶಿ ಗಣೇಶ್ ಉದನಡ್ಕ, ಪುತ್ತೂರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಚಿಲಂಪಾಡಿ, ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ ಎಸ್., ಮುಖ್ಯಶಿಕ್ಷಕಿ ಜಯಂತಿ ಬಿ.ಎಂ., ರವಿಚಂದ್ರ ಅತ್ರಿಜಾಲು, ನೆಲ್ಯಾಡಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ, ಕಾಮಧೇನು ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಉಷಾ ಅಂಚನ್, ರಮೇಶ್ ಶೆಟ್ಟಿ ಬೀದಿಮನೆ, ಗಿರೀಶ್ ಶೆಟ್ಟಿ ಬೀದಿಮನೆ, ಅರ್ಚಕ ಶ್ರೀಧರ ನೂಜಿನ್ನಾಯ, ಚಂದ್ರಶೇಖರ ಶೆಟ್ಟಿ ಗೊಳಿತೊಟ್ಟು, ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ಪ್ರಾಚಾರ್ಯ ಜಾರ್ಜ್ ಟಿ.ಎಸ್., ಅಂತರಾಜ್ಯ ಕ್ರೀಡಾ ನಿರೂಪಕ ಸುರೇಶ್ ಪಡಿಪಂಡ, ಮೋಹನ್ ಕಟ್ಟೆಮಜಲು, ಉಮೇಶ್ ಪೂಜಾರಿ ಪೊಸೊಳಿಕೆ, ಅನಿಲ್ ರೈ, ದೀಪಕ್, ದಿನೇಶ್, ರಕ್ಷಿತ್ ಮಡಿವಾಳ, ನೌಷದ್, ಪ್ರಜ್ವಲ್ ನವಾಜ್, ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪದಾಧಿಕಾರಿಗಳು, ಟೀಮ್ ಸಿಂಧೂರ ತಂಡದ ಸದಸ್ಯರು ಹಾಗೂ ಅಶ್ವತ್ಥ ಗೆಳೆಯರ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ವಂದನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಬಾಣಜಾಲ್ ವಂದಿಸಿದರು.