






ಬೆಳ್ತಂಗಡಿ: ಗಾಂಧಿ ಜಯಂತಿ ಪ್ರಯುಕ್ತ ಡಿ.ಕೆ.ಆರ್.ಡಿ.ಎಸ್ (ರಿ.) ಬೆಳ್ತಂಗಡಿ ವತಿಯಿಂದ ಅ.2ರಂದು ಗಂಡಿಬಾಗಿಲಿನಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು.
ಉದಯ ಮಹಾಸಂಘ, ಗಂಡಿಬಾಗಿಲು ಇದರ ನೇತೃತ್ವದಲ್ಲಿ ನೆರಿಯ ನಿವಾಸಿ ರೇಣುಕಾ ಅವರ ಮನೆ ನಿರ್ಮಾಣ ಕಾಮಗಾರಿಯ ಅಂಗವಾಗಿ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು. ಡಿ.ಕೆ.ಆರ್.ಡಿ.ಎಸ್ (ರಿ.) ಬೆಳ್ತಂಗಡಿಯ ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಪದಾಧಿಕಾರಿಗಳು, ಅರುಣೋದಯ ಮಹಾಸಂಘ ಬೆಳ್ತಂಗಡಿ, ಚೈತನ್ಯ ಮಹಾಸಂಘ ತೋಟತ್ತಾಡಿ ಹಾಗೂ ಉದಯ ಮಹಾಸಂಘ ಗಂಡಿಬಾಗಿಲಿನ ಸುಮಾರು 60 ಮಂದಿ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.
ಊರು ಹಾಗೂ ಪರವೂರಿನ ದಾನಿಗಳ ಸಹಕಾರದೊಂದಿಗೆ ಉದಯ ಮಹಾಸಂಘ, ಗಂಡಿಬಾಗಿಲು ಇದರ ನೇತೃತ್ವದಲ್ಲಿ ರೇಣುಕಾ ಅವರ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯದ ಮೂಲಕ ನೆರವು ನೀಡುವ ಉದ್ದೇಶದಿಂದ ಸದಸ್ಯರು ಮನೆ ನಿರ್ಮಾಣ ಕಾಮಗಾರಿಯಲ್ಲಿ ಕೈಜೋಡಿಸಿದರು.
ಕಾರ್ಯಕ್ರಮದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ.ಫಾ.ಆದರ್ಶ್ ಪಿ.ಎಸ್. ಹಾಗೂ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿ ಶ್ರಮದಾನಕ್ಕೆ ಸಹಕರಿಸಿದರು.








































































































