




ಕಡಬ: ಪೊಲೀಸ್ ಇಲಾಖೆಯ ಸಿವಿಲ್ ಪರೀಕ್ಷೆ ಕಾನ್ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ನಕಲಿ ಪ್ರವೇಶ ಪತ್ರ ಸೃಷ್ಟಿಸಿ ವಂಚಿಸಲು ಯತ್ನಿಸಿದ ಕಡಬ ಮೂಲದ ಯುವಕನನ್ನು ಮಂಗಳೂರು ನಗರದ ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಯಜ್ಞೇಶ್ ಬಿ.ಜೆ ರೈ(22) ಬಂಧಿತ ಆರೋಪಿ.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2026ರ ಸಹಿಷ್ಣುತೆ ಮತ್ತು ದೇಹದಾಢ್ಯತೆ ಪರೀಕ್ಷೆ ಸೆ.28 ರಂದು ಮಂಗಳೂರು ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು.
ನೋಂದಣಿ ಡೆಸ್ಕ್ ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಆರೋಪಿ ಯಜ್ಞೆಶ್ ರೈ ಹಾಲ್ ಟಿಕೆಟ್ ಸಂಖ್ಯೆ CPC5225446 ಹಾಜರುಪಡಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒದಗಿಸಿದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ 1:5 ಅರ್ಹತಾ ಪಟ್ಟಿಯಲ್ಲಿ ಈತನ ಹೆಸರಾಗಲಿ ಅರ್ಜಿ ಸಲ್ಲಿಕೆ ಕಂಡುಬಂದಿಲ್ಲ ಇದರಿಂದ ಅನುಮಾನಗೊಂಡ ಅಧಿಕಾರಿಗಳು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ಮೇಲ್ನೋಟಕ್ಕೆ ನಕಲಿ ಎಂಬುದು ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಬಯಲಾಗಿದೆ ಆರೋಪಿ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಲಿಲ್ಲ ಆದರೂ ದೈಹಿಕ ಪರೀಕ್ಷೆಗೆ ಹಾಜರಾಗೋ ದುರುದ್ದೇಶದಿಂದ ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್ ಟಿಕೆಟ್ ಪಡೆದುಕೊಂಡು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಬಳಸಿ ಅದರಲ್ಲಿ ತನ್ನ ಹೆಸರು ಹಾಗೂ ವಿವರಗಳನ್ನು ಎಡಿಟ್ ಮಾಡಿ ನಕಲಿ ಪ್ರವೇಶ ಪತ್ರ ಸೃಷ್ಟಿಸಿಕೊಂಡಿದ್ದನು.
ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಆ ನಕಲಿ ಹಾಲ್ ಟಿಕೆಟ್ ಎಡಿಟ್ ಮಾಡಿ ರಚಿಸಿರುವುದಕ್ಕೆ ಸಂಬಂಧಿಸಿದ ನೇರ ಡಿಜಿಟಲ್ ಪುರಾವೆಗಳು ಪತ್ತೆಯಾಗಿವೆ.
ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತ ಅಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ ಈ ನಕಲಿ ಪ್ರವೇಶ ಪತ್ರ ಪ್ರಿಂಟ್ ಮಾಡಿಕೊಂಡಿದ್ದ ಮೂಲವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಬರ್ಕೆ ಪೊಲೀಸರು ಠಾಣೆಯ ತನಿಖೆಯ ತಂಡ ಕಡಬಕ್ಕೆ ಆಗಮಿಸಿ ಸ್ಥಳೀಯ ಜೆರಾಕ್ಸ್ ಅಂಗಡಿಯೊಂದಕ್ಕೆ ಭೇಟಿ ನೀಡಿ ಮಹತ್ವದ ಮಹಜರು ಹಾಗೂ ಪರಿಶೀಲನೆ ನಡೆಸಿದೆ.









































































































