





ನೆಲ್ಯಾಡಿ: ಕಡಬ ತಾಲೂಕಿನ ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅನಿಲ ಸಮೀಪ ಶುಕ್ರವಾರ ಸಂಜೆ ಚಲಿಸುತ್ತಿದ್ದ ಕಾರಿಗೆ ಕಡವೆಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸುಬ್ರಹ್ಮಣ್ಯದಿಂದ ದೇವರ ದರ್ಶನ ಮುಗಿಸಿ ಕಾರಿನಲ್ಲಿ ನಾಲ್ವರು ಪ್ರಯಾಣಿಕರು ಹಿಂದಿರುಗುತ್ತಿದ್ದ ವೇಳೆ ಪಕ್ಕದ ಅರಣ್ಯ ಪ್ರದೇಶದಿಂದ ಕಡವೆಯೊಂದು ಏಕಾಏಕಿ ರಸ್ತೆಗೆ ನುಗ್ಗಿದೆ. ಈ ವೇಳೆ ಚಲಿಸುತ್ತಿದ್ದ ಕಾರಿಗೆ ಕಡವೆ ಬಲವಾಗಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಡವೆ ರಸ್ತೆಯಂಚಿಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ.
ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತಪಟ್ಟ ಕಡವೆಯ ಕಳೇಬರವನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ರಸ್ತೆಯ ಪ್ರದೇಶದ ಎರಡೂ ಬದಿಗಳಲ್ಲೂ ಅರಣ್ಯ ಪ್ರದೇಶ ಆವರಿಸಿಕೊಂಡಿದ್ದು, ರಸ್ತೆ ಬದಿಗೆ ಚಾಚಿಕೊಂಡಿರುವ ಪೊದೆಗಳು ವ್ಯಾಪಕವಾಗಿ ಬೆಳೆದಿವೆ. ಇದರಿಂದ ವಾಹನ ಸವಾರರಿಗೆ ರಸ್ತೆಯು ದೂರದವರೆಗೆ ಸರಿಯಾಗಿ ಗೋಚರಿಸದೆ, ಅರಣ್ಯದಿಂದ ಏಕಾಏಕಿ ಕಾಡುಪ್ರಾಣಿಗಳು ರಸ್ತೆಗೆ ಪ್ರವೇಶಿಸುವ ಸಂದರ್ಭ ಅಪಾಯ ಎದುರಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದೇ ಪ್ರದೇಶದಲ್ಲಿ ಈ ಹಿಂದೆ ಕಾಡಾನೆಯೊಂದು ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಘಟನೆಯೂ ನಡೆದಿತ್ತು. ಆಗ ಅರಣ್ಯ ಇಲಾಖೆ ವತಿಯಿಂದ ರಸ್ತೆಯ ಎರಡೂ ಬದಿಗಳಲ್ಲಿದ್ದ ಪೊದೆಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಬಳಿಕ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿನ ಪೊದೆಗಳನ್ನು ನಿಯಮಿತವಾಗಿ ತೆರವುಗೊಳಿಸುವುದು ಸೇರಿದಂತೆ ಕಾಡುಪ್ರಾಣಿಗಳ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.









































































































