





ನೆಲ್ಯಾಡಿ: ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಮನೆಯ ಹಿಂಬದಿ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹6 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಅ.1ರಂದು ನಡೆದಿದೆ.
ಅಡ್ಡಹೊಳೆಯ ಕಕುತ್ತಿಲ್ ಮನೆಯಲ್ಲಿ ವಾಸವಾಗಿರುವ ದಿ.ತೋಮಸ್ ಕೆ.ಎಸ್. ಅವರ ಪತ್ನಿ ಶಾಲಿನಿ(52) ಅವರು ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.1ರಂದು ಮನೆಯವರೆಲ್ಲ ಚರ್ಚ್ ನ ಹಬ್ಬಕ್ಕೆ ಹೋದ ಸಂದರ್ಭ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯ ನಡುವಿನ ಅವಧಿಯಲ್ಲಿ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಮನೆಯ ಹಿಂಬದಿ ಬಾಗಿಲಿನ ಬೀಗವನ್ನು ಬಲವಂತವಾಗಿ ಮುರಿದು ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಾರೆ. ಬಳಿಕ ಬ್ಯಾಗ್ನಲ್ಲಿ ಇರಿಸಲಾಗಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಳವಾದ ವಸ್ತುಗಳಲ್ಲಿ 25 ಗ್ರಾಂ ತೂಕದ ಮೂರು ಚಿನ್ನದ ಬಳೆಗಳು, 6 ಗ್ರಾಂ ತೂಕದ ಚಿನ್ನದ ಬ್ರಾಸ್ಲೈಟ್, 20 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಹಾಗೂ 24 ಗ್ರಾಂ ತೂಕದ ಚಿನ್ನದ ಸರ ಸೇರಿವೆ. ಒಟ್ಟು ಸುಮಾರು 75 ಗ್ರಾಂ ತೂಕದ ಈ ಚಿನ್ನಾಭರಣಗಳ ಅಂದಾಜು ಮೌಲ್ಯ ₹6 ಲಕ್ಷ ಎಂದು ತಿಳಿಸಲಾಗಿದೆ.
ಈ ಕುರಿತು ಅಪರಿಚಿತ ಕಳ್ಳರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









































































































