




ನೆಲ್ಯಾಡಿ: ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಅಟೋರಿಕ್ಷಾ ಚಲಾಯಿಸಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಕಡಬ ತಾಲೂಕು ಶಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಭಾನುವಾರದಂದು ನಡೆದಿದೆ.
ಘಟನೆಯಲ್ಲಿ ದೇರಣೆ ನಿವಾಸಿ ಟಿ.ಜನಾರ್ಧನ ಗೌಡ(45) ಅವರ ತಾಯಿ ಕಮಲ ಹಾಗೂ ಮಗ ಚಿರಾಯು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ಜನಾರ್ಧನ ಗೌಡ ಅವರು ತಮ್ಮ ಪತ್ನಿಗೆ ಸೇರಿದ ಅಟೋರಿಕ್ಷಾದಲ್ಲಿ ಹೊನ್ನಪ್ಪ ಗೌಡ ಅವರನ್ನು ಚಾಲಕರಾಗಿ ಕರೆದುಕೊಂಡು, ತಾಯಿ ಕಮಲ ಹಾಗೂ ಮಗ ಚಿರಾಯು ಅವರೊಂದಿಗೆ ಮನೆಯಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದಾಗ ದೇರಣೆ ಬಳಿ ತಲುಪಿದಾಗ ಅಟೋರಿಕ್ಷಾ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಜನಾರ್ಧನ ಗೌಡ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಯ ಮುಂಭಾಗ ಹಾಗೂ ಹಿಂಭಾಗಕ್ಕೆ ರಕ್ತಗಾಯ ಮತ್ತು ಎಡ ಭುಜಕ್ಕೆ ಗುದ್ದಿದ ಗಾಯವಾಗಿದೆ. ಕಮಲ ಅವರಿಗೆ ದವಡೆಗೆ ರಕ್ತಗಾಯವಾಗಿದ್ದು, ಚಿರಾಯು ಅವರ ಹಣೆಯ ಎಡಭಾಗಕ್ಕೆ ಗುದ್ದಿದ ಗಾಯವಾಗಿದೆ.
ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಯಿತು.
ಮೊದಲಿಗೆ ಸಣ್ಣಪುಟ್ಟ ಗಾಯಗಳೆಂದು ಭಾವಿಸಿದ್ದ ಜನಾರ್ಧನ ಗೌಡ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ತಡವಾಗಿ ಪೊಲೀಸ್ ದೂರು ನೀಡಲಾಗಿದೆ.
ಈ ಕುರಿತು ಅಟೋರಿಕ್ಷಾ ಚಾಲಕ ಹೊನ್ನಪ್ಪ ಗೌಡ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































