




ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆಲತ್ತಿಂಜ ನಿವಾಸಿ, ಹಲವು ವರ್ಷಗಳ ಹಿಂದೆ ಹಿಂದುಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ದಿವಂಗತ ಪಚ್ಚು ಕೊಕ್ಕಡ ಅವರ ತಾಯಿ ಹೊನ್ನಮ್ಮ ಅವರು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದು, ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಸೇವಾ ತಂಡದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ತಂಡದ ಪ್ರಥಮ ಸೇವಾ ಯೋಜನೆಯ ಅಂಗವಾಗಿ ಸಂಗ್ರಹಿಸಲಾದ ₹70,910 ಮೊತ್ತವನ್ನು ಸೆ.16ರಂದು ಹೊನ್ನಮ್ಮ ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ದಾನಿ ಗಣೇಶ್ ಗೌಡ ಕಲಾಯಿ ಅವರ ಮುಖಾಂತರ ಹಾಗೂ ತಂಡದ ಸದಸ್ಯರು ಮತ್ತು ಹಿರಿಯರ ಸಮ್ಮುಖದಲ್ಲಿ ನೆರವಿನ ಮೊತ್ತವನ್ನು ನೀಡಲಾಯಿತು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹೊನ್ನಮ್ಮ ಅವರಿಗೆ ಅಗತ್ಯ ಸಂದರ್ಭದಲ್ಲಿ ನೆರವಾಗುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದೆ. ತಂಡದ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಸಂಗ್ರಹಿಸಲಾದ ಮೊತ್ತವನ್ನು ಅವರ ಅಗತ್ಯ ವೆಚ್ಚಗಳಿಗೆ ಬಳಸಿಕೊಳ್ಳುವಂತೆ ಹಸ್ತಾಂತರಿಸಲಾಯಿತು.
ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯ ಸೇವಾ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪವನ್ನು ತಂಡ ಹೊಂದಿದೆ ಎಂದು ತಿಳಿಸಿದರು.









































































































