‘ಸಂಕಲ್ಪ @ 75’ ಕಾರ್ಯಕ್ರಮಕ್ಕೆ ಚಾಲನೆ; ಪೂರ್ವ ವಿದ್ಯಾರ್ಥಿಗಳ ಸಮಾಗಮ, ನಿವೃತ್ತ ಶಿಕ್ಷಕರಿಗೆ ಗುರುವಂದನೆ
ನೆಲ್ಯಾಡಿ: ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ನ 75ನೇ ವರ್ಷದ ಸಂಭ್ರಮಾಚರಣೆ ಹಾಗೂ ಪೂರ್ವ ವಿದ್ಯಾರ್ಥಿ ಸಮಾಗಮದ ಅಂಗವಾಗಿ ‘ಸಂಕಲ್ಪ @ 75’ ಕಾರ್ಯಕ್ರಮ ಭಾನುವಾರದಂದು ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡುವ ಮೂಲಕ 75ರ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು. ಬಳಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ವರ್ಗಾವಣೆಗೊಂಡ ಶಿಕ್ಷಕರನ್ನು ವೇದಿಕೆಗೆ ಸ್ವಾಗತಿಸಿ, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಪೂರ್ವ ವಿದ್ಯಾರ್ಥಿಗಳಾದ ಡಾ.ಅಭಯಕುಮಾರ್, ಜಾನ್ ಪಿ.ಎಸ್., ಶೇಖ್ ಆದಂ ಸಾಹೇಬ್, ಡಾ.ವಾಸಪ್ಪ ಗೌಡ, ಜಯರಾಮ ಗೌಡ ನಾಲ್ಗುತ್ತು, ಗಂಗಾಧರ ಶೆಟ್ಟಿ, ರಾಜೇಶ್, ಮಹಮ್ಮದ್ ಹನೀಫ್ ಸಿಟಿ ಹಾಗೂ ರವಿಚಂದ್ರ ಹೊಸವಕ್ಲು ಅವರು ಚೀಟಿ ಎತ್ತುವ ಮೂಲಕ ತಮಗೆ ಸಿಕ್ಕ ವಿಷಯಗಳ ಕುರಿತು ಮಾತನಾಡಿ, ಶಾಲೆಯಲ್ಲಿ ಕಲಿತ ದಿನಗಳ ಅನುಭವ ಹಾಗೂ ನೆನಪುಗಳನ್ನು ಹಂಚಿಕೊಂಡರು. ಪೂರ್ವ ವಿದ್ಯಾರ್ಥಿಗಳಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು.
ನಿವೃತ್ತ ಶಿಕ್ಷಕರಿಗೆ ಗುರುವಂದನೆ ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಶಾಲು, ಹಾರಾರ್ಪಣೆ ಹಾಗೂ ಸ್ಮರಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು. ಶಿಕ್ಷಕರಾದ ರಾಧಾಕೃಷ್ಣ, ಪುಷ್ಪಲತಾ, ಹೇಮಾಲತಾ, ಧರ್ಣಪ್ಪ ಗೌಡ, ದಿನಕರ ರಾವ್, ವಸಂತಿ, ಸಾರಮ್ಮ, ಅನ್ನಮ್ಮ, ಜಗನ್ನಾಥ, ಕೇಶವ ಗೌಡ, ಮೇರಿ, ಸೀತಮ್ಮ, ಜೆಸ್ಸಿ, ಗಿರಿಜಾ, ಚಿನ್ನಮ್ಮ, ತಾರ, ಉಮಾವತಿ, ವೀಣಾ, ಭಾರತಿ ಉಳ್ಳಾಲ, ಯಮುನಾ, ಮಮತಾ, ಸುನಂದ, ಶಾಂತಿ, ಜಯಂತಿ, ಒ.ಜೆ.ಅನ್ನಮ್ಮ, ಗುಡ್ಡಪ್ಪ ಗೌಡ ಬಲ್ಯ, ಜನಾರ್ದನ ಟಿ. ಹಾಗೂ ಶಿವಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು.
ನಿವೃತ್ತ ಶಿಕ್ಷಕರಾದ ದಿನಕರ ಹಾಗೂ ಜಗನ್ನಾಥ ಅವರು ಸಂದರ್ಭೋಚಿತವಾಗಿ ಮಾತನಾಡಿ, ಶಾಲೆಯೊಂದಿಗಿನ ತಮ್ಮ ಸೇವಾ ದಿನಗಳ ನೆನಪುಗಳನ್ನು ಹಂಚಿಕೊಂಡರು. ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂತ ಜಾರ್ಜ್ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕ ತೋಮಸ್ ಎಂ.ಐ. ಹಾಗೂ ಶಾಲೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಶಾಲಾ ಅಭಿವೃದ್ಧಿಗೆ ಪೂರ್ವ ವಿದ್ಯಾರ್ಥಿಗಳ ಸಹಕಾರ ಅಗತ್ಯ 75ರ ಸಂಭ್ರಮಾಚರಣೆ ಸಮಿತಿ ಅಧ್ಯಕ್ಷ ಶಾಜಿ ವರ್ಗೀಸ್ ಮಾತನಾಡಿ, ಐದು ವರ್ಷಗಳ ಹಿಂದೆ ತಮ್ಮ ತಂದೆ ಯು.ಪಿ.ವರ್ಗೀಸ್ ಅವರು ಶಾಲೆಯ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯನ್ನು ಈಡೇರಿಸುವ ಕಾಲ ಇದೀಗ ಬಂದಿದೆ. ಹಲವು ಶಿಕ್ಷಕರು ಈ ಶಾಲೆಗೆ ಅಡಿಪಾಯ ಹಾಕಿಕೊಟ್ಟು ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಆಶೀರ್ವಾದದೊಂದಿಗೆ ಶಾಲೆಯ ಅಭಿವೃದ್ಧಿಗೆ ಪೂರ್ವ ವಿದ್ಯಾರ್ಥಿಗಳು ಸಹಕಾರ ನೀಡಬೇಕು, 75ರ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುವುದರೊಂದಿಗೆ ನಾವು ಕಲಿತ ಶಾಲೆಗೆ ದೊಡ್ಡ ಕೊಡುಗೆಯನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದು ಎಲ್ಲಾ ಪೂರ್ವ ವಿದ್ಯಾರ್ಥಿಗಳು ಕೈಜೋಡಿಸುವಂತೆ ವಿನಂತಿಸಿದರು.
ಗೌರವಾಧ್ಯಕ್ಷ ಸರ್ವೋತ್ತಮ ಗೌಡ ಮಾತನಾಡಿ, ಪ್ರಸ್ತುತ ಶಾಲೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊಠಡಿಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ, 75ನೇ ವರ್ಷಾಚರಣೆ ಸಂದರ್ಭದಲ್ಲಿ ಅದನ್ನು ಲೋಕಾರ್ಪಣೆ ಮಾಡಬೇಕೆಂಬ ಚಿಂತನೆ ಇದೆ. ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಸಂಸದರ 10 ಲಕ್ಷ ರೂ. ಹಾಗೂ 75ರ ಸಂಭ್ರಮಾಚರಣೆ ಸಮಿತಿಯ ಸಹಕಾರದಿಂದ ಒಟ್ಟು 20 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಬಸ್ಸು ಹಾಗೂ ನೂತನ ಕಟ್ಟಡ ನಿರ್ಮಾಣದ ಅಗತ್ಯವಿದ್ದು, ಇದಕ್ಕೂ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಶ್ರೀಧರ ಕೆ.ಎಸ್. ಸ್ವಾಗತಿಸಿದರು. ಎಸ್ಡಿಎಂಸಿ ಅಧ್ಯಕ್ಷ ದಿನಕರ ಕೆ.ಹೆಚ್. ವಂದಿಸಿದರು. ಶಿಕ್ಷಕ ವಿಮಲ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ಹಾಗೂ ಎಸ್ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು ವಿವಿಧ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಸಹಕರಿಸಿದರು.
ಸಂಕಲ್ಪ @ 75ರಲ್ಲಿ ಕೈಗೊಂಡ ಸಂಕಲ್ಪಗಳು: ಶಾಲೆಗೆ ಅಗತ್ಯವಿರುವ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಸಭಾಂಗಣ ನಿರ್ಮಾಣ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಬಸ್ ವ್ಯವಸ್ಥೆ ಕಲ್ಪಿಸುವುದು. ವಿಜ್ಞಾನ ಪ್ರಯೋಗಾಲಯ, ಗಣಿತ ಪ್ರಯೋಗಾಲಯ ಹಾಗೂ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ ಸ್ಥಾಪಿಸುವುದು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಕಂಪ್ಯೂಟರ್ಗಳನ್ನು ಅಳವಡಿಸಿ, ಆಧುನಿಕ ತಂತ್ರಜ್ಞಾನ ಆಧಾರಿತ ಕಲಿಕೆಗೆ ಉತ್ತೇಜನ ನೀಡುವುದು. ವಿದ್ಯಾರ್ಥಿಗಳ ಸಮಗ್ರ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುವಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಲಾಯಿತು.