ಸರ್ವೆ ನಂ.186/1 ಜಮೀನಿನ ಪ್ಲಾಟಿಂಗ್ಗೆ ಗ್ರಾಮಸ್ಥರ ಆಗ್ರಹ; ತಿಂಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಧರಣಿ ಎಚ್ಚರಿಕೆ
ನೆಲ್ಯಾಡಿ: ಗ್ರಾಮದ ಸರ್ವೆ ನಂ.186/1ರ ಜಮೀನಿನ ಪ್ಲಾಟಿಂಗ್ಗೆ 35 ವರ್ಷ ಕಳೆದರೂ ಕ್ರಮವಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಗ್ರಾ.ಪಂ.ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇದೇ ವೇಳೆ ನೆಲ್ಯಾಡಿ ಪೇಟೆಯ ಅಂಗನವಾಡಿಗೆ ಮೀಸಲಿಟ್ಟ ಜಾಗದ ವಿಚಾರದಲ್ಲೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ಚರ್ಚಾ ನಿಯಂತ್ರಣ ಅಧಿಕಾರಿಯಾಗಿದ್ದರು.
ಜಮೀನು ಮಂಜೂರಾಗಿ 35 ವರ್ಷ ಕಳೆದರೂ ಪ್ಲಾಟಿಂಗ್ ಆಗಿಲ್ಲ. ಇದರಿಂದ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಭೂ ಪರಿವರ್ತನೆ, ಕುಟುಂಬ ಸದಸ್ಯರೊಳಗೆ ವಿಭಾಗ ಪತ್ರ ಹಾಗೂ ಸಾಲ ಪಡೆಯಲು ತೊಂದರೆಯಾಗುತ್ತಿದೆ. ಜಮೀನಿನಲ್ಲಿ ಅರಣ್ಯ ಭೂಮಿ ಸೇರಿರುವುದರಿಂದ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರದ ಅಗತ್ಯವೂ ಎದುರಾಗಿದೆ. ಪಹಣಿ ಹಾಗೂ ಖಾತಾ ಪ್ರತಿಗಳು ಗ್ರಾಮ ಒನ್ನಲ್ಲಿ ಲಭ್ಯವಿಲ್ಲದ ಕಾರಣ ತಾಲೂಕು ಕಚೇರಿಗೆ ಅಲೆದಾಡಬೇಕಾಗಿದೆ ಎಂದು ಗ್ರಾಮಸ್ಥರು ದೂರಿದರು. ಸರ್ವೆ ಇಲಾಖೆ ಮೇಲ್ವಿಚಾರಕ ಚಂದ್ರಶೇಖರ ಪ್ರತಿಕ್ರಿಯಿಸಿ, ಶಿವಮೊಗ್ಗದ ತಂಡದಿಂದ ಪ್ಲಾಟಿಂಗ್ ಕಾರ್ಯ ನಡೆಯುತ್ತಿದ್ದು, ನಾಳೆಯಿಂದಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜತೆಗೆ ಜಾಗದ ಆರ್ಟಿಸಿ ದಾಖಲೆಯನ್ನೂ ಸರಿಪಡಿಸಬೇಕೆಂದು ಆಗ್ರಹಿಸಿದರು.
ಅಂಗನವಾಡಿ ಮೀಸಲು ಜಾಗ ಒತ್ತುವರಿ ತೆರವುಗೊಳಿಸಲು ಆಗ್ರಹ ಅಂಗನವಾಡಿ ಕೆರೆ ಜಾಗದಲ್ಲಿದೆ ಎಂಬ ಕಾರಣ ನೀಡಿ ಸ್ಥಳಾಂತರಿಸುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಆದರೆ ಮೀಸಲಿಟ್ಟಿರುವ ಜಾಗವೇ ಒತ್ತುವರಿಯಾಗಿದ್ದು, ಸುತ್ತಮುತ್ತಲಿನ ಕೆರೆ ಜಾಗವೂ ಅತಿಕ್ರಮಣಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಖಾಸಗಿಯವರಿಗೆ ಜಾಗ ಮಂಜೂರಾಗಿರುವಾಗ ಅಂಗನವಾಡಿಗೆ ಮಾತ್ರ ಜಾಗ ನೀಡಲು ಏಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಸಲಾಂ ಬಿಲಾಲ್, ಮೊಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್, ಕಮಾಲ್, ಶಾಕೀರ್, ಗಣೇಶ್ ಪೂಜಾರಿ ಹಾಗೂ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಪ್ರಶ್ನಿಸಿದರು. ಅಂಗನವಾಡಿಗೆ ಸೂಕ್ತ ಜಾಗ ಮಂಜೂರು ಮಾಡುವುದರ ಜತೆಗೆ ಮೀಸಲು ಜಾಗದ ಒತ್ತುವರಿ ತೆರವುಗೊಳಿಸಿ, ಜಾಗದ ಆರ್ಟಿಸಿ ದಾಖಲೆಯನ್ನೂ ಸರಿಪಡಿಸಬೇಕೆಂದು ಆಗ್ರಹಿಸಿದರು.
ಕುರುಬರಕೇರಿಯ ಯುವಕನ ಸಂಶಯಾಸ್ಪದ ಸಾವಿನ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಕೆ.ಪಿ.ಆನಂದ ಒತ್ತಾಯಿಸಿದರು. ಮರಣೋತ್ತರ ಪರೀಕ್ಷೆ ವರದಿ ಕುರಿತು ಪ್ರಶ್ನಿಸಿದಾಗ ಮೇಲಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಪೊಲೀಸರು ತಿಳಿಸಿದರು.
ಆಲಂಕಾರು-ಮಾದೇರಿ-ನೆಲ್ಯಾಡಿ, ಕೊಪ್ಪ-ಕೆರ್ನಡ್ಕ ರಸ್ತೆ ದುರಸ್ತಿ, ರಾಷ್ಟ್ರೀಯ ಹೆದ್ದಾರಿಯಿಂದ ಪಂಚಾಯಿತಿಗೆ ಸಂಪರ್ಕಿಸುವ ರಸ್ತೆಯ ಕಳಪೆ ಕಾಮಗಾರಿ, ಮಳೆ ಮಾಪನದ ತಾಂತ್ರಿಕ ದೋಷ, ಮಣ್ಣು ಪರೀಕ್ಷೆ, ಜೆಜೆಎಂ ಕಾಮಗಾರಿ ಹಾಗೂ ನೆಲ್ಯಾಡಿ-ಬೈಲು ಸೇತುವೆ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಯಿತು. ಫುಟ್ಪಾತ್ನಲ್ಲಿರುವ ವಿದ್ಯುತ್ ಪರಿವರ್ತಕ ಸ್ಥಳಾಂತರ ಹಾಗೂ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೂ ಒತ್ತಾಯಿಸಲಾಯಿತು.
ನೆಲ್ಯಾಡಿಯಲ್ಲಿ 200ಕ್ಕೂ ಹೆಚ್ಚು ರಿಕ್ಷಾಗಳಿದ್ದರೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ ಮನವಿ ಮಾಡಿದರು. ಸರಕಾರಿ ಜಾಗ ಲಭ್ಯವಿದ್ದರೆ ರಿಕ್ಷಾ ಪಾರ್ಕಿಂಗ್ಗೆ ವ್ಯವಸ್ಥೆ ಮಾಡುವುದಾಗಿ ಆಡಳಿತಾಧಿಕಾರಿ ಭರವಸೆ ನೀಡಿದರು.
ವಿವಿಧ ಇಲಾಖೆಗೆ ಸೇರಿದ ಅಧಿಕಾರಿಗಳು ಭಾಗವಹಿಸಿ ಇಲಾಖಾವರು ಮಾಹಿತಿಯನ್ನು ನೀಡಿದರು. ಪಿಡಿಒ ಜಯರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ವಂದಿಸಿದರು.