






ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಶ್ರಾವಣ ಶುಕ್ರವಾರದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಪರಮಪೂಜ್ಯ ಸಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಜೈನ ಮಠ ಕಾರ್ಕಳ ಇವರ ಶುಭಾಶೀರ್ವಾದಗಳೊಂದಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಶ್ರಾವಣ ಶುಕ್ರವಾರದ ವಿಶೇಷ ಪೂಜೆಯ ಅಂಗವಾಗಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಶ್ರೀಗಂಧ, ಎಳನೀರು, ಹಾಲು, ಚಂದನ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಕ್ಷೇತ್ರದ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ 25 ಬಗೆಯ ವಿಶೇಷ ಕಜ್ಜಾಯಗಳನ್ನು ಸಮರ್ಪಿಸಲಾಯಿತು. ಸಾಮೂಹಿಕ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಿದವು.
ಪೂಜಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಶಿಲದ ರಾಣಿ ಕಾಳಲಾ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಹಾಗೂ ಊರ-ಪರಊರಿನ ಶ್ರಾವಕ-ಶ್ರಾವಿಕೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.









































































































