ವಿಶ್ವೇಶ್ವರಯ್ಯ ಅವರ ಸಾಧನೆ ವಿದ್ಯಾರ್ಥಿಗಳಿಗೆ ಸದಾ ಸ್ಫೂರ್ತಿ: ವರ್ಗೀಸ್ ಕೈಪಿನಡ್ಕ





ಕೊಕ್ಕಡ: ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಸೂಕ್ಷ್ಮ ವಲಯ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ, ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಮುಖವಾಗಿ ಚರ್ಚಿಸಿ ಕರಡು ಅಧಿಸೂಚನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಶಿಶಿಲದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಶಿಶಿಲ ಗ್ರಾಮ ಪಂಚಾಯತ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಜನವಸತಿ ಪ್ರದೇಶ ಹಾಗೂ ಪಶ್ಚಿಮ ಘಟ್ಟದ ನಡುವೆ ಸ್ಪಷ್ಟವಾದ ಗಡಿ ಗುರುತಿಸಬೇಕು. ಜನವಸತಿ ಮತ್ತು ಕೃಷಿ ಪ್ರದೇಶಗಳಿಗೆ ಯಾವುದೇ ಅನಗತ್ಯ ನಿರ್ಬಂಧಗಳು ಎದುರಾಗದಂತೆ ಶೂನ್ಯ ಬಫರ್ ಜೋನ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಯಿಂದ ಸ್ಥಳೀಯ ರೈತರು ಹಾಗೂ ಗ್ರಾಮೀಣ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿಪರಿಸರ ಸೂಕ್ಷ್ಮ ಪ್ರದೇಶ 7ನೇ ಕರಡು ಅಧಿಸೂಚನೆ ವಿಚಾರವನ್ನು ಪರಿಗಣಿಸಿ, ಅದನ್ನು ಸಂಪೂರ್ಣವಾಗಿ ಕೈಬಿಡುವ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಕುರಿತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರು ಹಾಗೂ ಬೆಳ್ತಂಗಡಿ ತಹಶೀಲ್ದಾರರಿಗೆ ಸಲ್ಲಿಸುವ ಮನವಿಯನ್ನು ಶಿಶಿಲ ಗ್ರಾಮ ಪಂಚಾಯತ್ ಮೂಲಕ ನೀಡಲಾಯಿತು.
ಪ್ರತಿಭಟನೆಯಲ್ಲಿ ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಹಾಗೂ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.









































































































