







ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಜೆಸಿ ಸಪ್ತಾಹದ ಉದ್ಘಾಟನೆ ಹಾಗೂ ನೆಲ್ಯಾಡಿಯ ಆಟೋ ಚಾಲಕರಿಗೆ ಸ್ಟೀಲ್ ಬಾಟಲ್ ವಿತರಿಸುವ ಕಾರ್ಯಕ್ರಮ ಭಾನುವಾರದಂದು ನೆಲ್ಯಾಡಿಯ ಗೌರಿಜಾಲ್ ಆರ್ಕೇಡ್ನಲ್ಲಿ ನಡೆಯಿತು.
ಜೆಸಿಐ ಭಾರತ ವಲಯ 15ರ ಸಮುದಾಯ ಅಭಿವೃದ್ಧಿ ವಲಯ ನಿರ್ದೇಶಕ ವಿಘ್ನೇಶ್ ಪ್ರಸಾದ್ ರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಿಕ್ಷಾ ಚಾಲಕರು ದಿನವಿಡೀ ಸಾರ್ವಜನಿಕರಿಗೆ ಸೇವೆ ನೀಡುವ ಮೂಲಕ ಸಮಾಜದ ಪ್ರಮುಖ ಭಾಗವಾಗಿದ್ದಾರೆ. ಅವರ ಆರೋಗ್ಯದ ದೃಷ್ಟಿಯಿಂದ ನೆಲ್ಯಾಡಿ ಜೆಸಿಐ ವತಿಯಿಂದ ಸ್ಟೀಲ್ ಬಾಟಲ್ ವಿತರಿಸುತ್ತಿರುವುದು ಉತ್ತಮ ಹಾಗೂ ಸಮಾಜಮುಖಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ಮಾತನಾಡಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರೆಯುವ ನೀರನ್ನು ಒಂದೇ ಬಾರಿ ಬಳಕೆ ಮಾಡುವುದು ಸೂಕ್ತ. ಅದೇ ಬಾಟಲಿಯನ್ನು ಪದೇಪದೆ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಸಾರ್ವಜನಿಕರಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಈ ಹಿನ್ನೆಲೆಯಲ್ಲಿ ಜೆಸಿಐ ವತಿಯಿಂದ ನೆಲ್ಯಾಡಿಯ ಎಲ್ಲಾ ಆಟೋ ಚಾಲಕರಿಗೂ ಸ್ಟೀಲ್ ಬಾಟಲ್ ವಿತರಿಸಲಾಗುತ್ತಿದೆ ಎಂದರು.
ನೆಲ್ಯಾಡಿ ಜೆಸಿಐನ ನಿಕಟಪೂರ್ವಾಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಮಾತನಾಡಿ, ಕೆಲಸದ ಒತ್ತಡದ ನಡುವೆಯೂ ರಿಕ್ಷಾ ಚಾಲಕರು ಉತ್ತಮ ಆಹಾರ ಸೇವನೆ ಹಾಗೂ ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ನೆಲ್ಯಾಡಿ ಆಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ನೆಲ್ಯಾಡಿ ಮಹಿಳಾ ಜೆಸಿ ಅಧ್ಯಕ್ಷೆ ನವ್ಯಾ ಪ್ರಸಾದ್, ಜೆಸಿ ಸಪ್ತಾಹದ ಯೋಜನಾ ನಿರ್ದೇಶಕರಾದ ದೀಪಿಕಾ ಡಿ.ಎಂ. ಹಾಗೂ ರೇಷ್ಮಾ ಉಪಸ್ಥಿತರಿದ್ದರು.
ಜೆಸಿಐ ನೆಲ್ಯಾಡಿ ಘಟಕದ ಜೊತೆ ಕಾರ್ಯದರ್ಶಿ ಸುಪ್ರಿತಾ ರವಿಚಂದ್ರ ವಂದಿಸಿದರು. ಸದಸ್ಯೆ ಜಾಹ್ನವಿ ಜೇಸಿವಾಣಿ ವಾಚಿಸಿದರು. ನಮಿತ ಆಮುಂಜ, ಮನ್ವಿತ ಹೆಗ್ಡೆ ಹಾಗೂ ಪ್ರಶಾಂತ್ ಕುಮಾರ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.









































































































