






ಕಡಬ: ಸ್ಕೂಟರ್ಗೆ ಹಿಂದಿನಿಂದ ಮೋಟಾರ್ ಸೈಕಲ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮಹಿಳೆ ಗಾಯಗೊಂಡು, ಬೈಕ್ ಸವಾರ ಸ್ಥಳದಿಂದ ಪರಾರಿಯಾದ ಘಟನೆ ಸೆ.9ರಂದು ಬೆಳಗ್ಗೆ ಬಲ್ಯ ಕ್ರಾಸ್ನಲ್ಲಿ ನಡೆದಿದೆ.
ಕೊಕ್ಕಡ ಗ್ರಾಮದ ಪುತ್ಯ ಮನೆ ನಿವಾಸಿ ವಿಮಲ್ ಕುಮಾರ್ ಕೆ.ಎ. ಅವರ ಪತ್ನಿ ಮಾನಸ ವಿ. (37) ಗಾಯಗೊಂಡವರು. ಇವರು ಕಡಬದ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸೆ.9ರಂದು ಬೆಳಗ್ಗೆ 8.45ರ ಸುಮಾರಿಗೆ ಮಾನಸ ಅವರು ತಮ್ಮ ಸ್ಕೂಟರ್ ನಲ್ಲಿ ಪುತ್ಯ ಮನೆಯಿಂದ ಕಡಬಕ್ಕೆ ನೆಲ್ಯಾಡಿ ಮಾರ್ಗವಾಗಿ ತೆರಳುತ್ತಿದ್ದರು. ಬೆಳಗ್ಗೆ ಸುಮಾರು 9.15ರ ವೇಳೆಗೆ ಬಲ್ಯ ಗ್ರಾಮದ ಬಲ್ಯ ಕ್ರಾಸ್ ಬಳಿ ತಲುಪಿದಾಗ, ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ಸವಾರನೊಬ್ಬ ಸಹಸವಾರನನ್ನು ಕೂರಿಸಿಕೊಂಡು, ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಕಾರನ್ನು ಓವರ್ಟೇಕ್ ಮಾಡಿಕೊಂಡು ಬಂದು ಅವರ ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಮಾನಸ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಎಡಕೈ ಮಣಿಗಂಟು ಹಾಗೂ ಎಡ ಮೊಣಗಂಟಿಗೆ ತೀವ್ರ ಗಾಯಗಳಾಗಿದ್ದು. ಸ್ಥಳದಲ್ಲಿದ್ದವರು ಅವರಿಗೆ ಪ್ರಾಥಮಿಕವಾಗಿ ಉಪಚರಿಸಿ, ಬಳಿಕ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಅತ್ತಾವರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಳಿಕ ಬೈಕ್ ಸವಾರ ಬೈಕ್ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬೈಕ್ನ ನೋಂದಣಿ ಸಂಖ್ಯೆ ಗಮನಿಸಲು ಸಾಧ್ಯವಾಗಿಲ್ಲ. ಆದರೆ ಸೈಡ್ ಮಿರರ್ ಮೂಲಕ ಬೈಕ್ ಸವಾರನನ್ನು ನೋಡಿದ್ದು, ಮುಂದೆ ಕಂಡರೆ ಗುರುತಿಸುವುದಾಗಿ ಮಾನಸ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಬೈಕ್ ಸವಾರನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.









































































































