





ಶಿಶಿಲ: ಸೃಷ್ಟಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ ಬೈರಕಟ್ಟ ಅವರ ಅಧ್ಯಕ್ಷತೆಯಲ್ಲಿ ಶಿಶಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭಾಧ್ಯಕ್ಷೆ ಮೀನಾಕ್ಷಿ ಬೈರಕಟ್ಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಕ್ಕೂಟದ ಮುಖ್ಯ ಬರಹಗಾರ್ತಿ ಶಾರದಾ ಅವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ವಲಯ ಮೇಲ್ವಿಚಾರಕಿ ವೀಣಾಶ್ರೀ ಅವರು ಸಂಜೀವಿನಿ ಕಾರ್ಯಕ್ರಮದ ಸಮಗ್ರ ಮಾಹಿತಿ ನೀಡಿದರು. ಬಳಿಕ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಶುಭ ಹಾರೈಸಿದರು.
ಮಹಾಸಭೆಯ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಅತ್ಯುತ್ತಮ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ ವಿಮೆ ಹೊಂದಿದ್ದ ಸಂಜೀವಿನಿ ಸಂಘದ ಸದಸ್ಯೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬದ ಸದಸ್ಯರಿಗೆ ದೊರೆತ ವಿಮಾ ಮೊತ್ತವನ್ನು ಬ್ಯಾಂಕ್ ಆಫ್ ಬರೋಡಾ ಅಧಿಕಾರಿ ರಮೇಶ್ ಅವರು ಹಸ್ತಾಂತರಿಸಿದರು.
ನಿರ್ಗಮನ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು, ಸಿಬ್ಬಂದಿ ವರ್ಗ ಹಾಗೂ ಒಕ್ಕೂಟದ ಕಾರ್ಯಚಟುವಟಿಕೆಗಳಿಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ಮಹಾಸಭೆಯ ಅಂಗವಾಗಿ ಒಕ್ಕೂಟದ ಸದಸ್ಯೆಯರು ತಯಾರಿಸಿದ ವಿವಿಧ ಉತ್ಪನ್ನಗಳ ವಿಶೇಷ ಹಳ್ಳಿ ಸಂತೆಯನ್ನು ಆಯೋಜಿಸಲಾಗಿತ್ತು. ಸದಸ್ಯೆಯರ ಸ್ವಾವಲಂಬನೆ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಳ್ಳಿ ಸಂತೆ ಗಮನ ಸೆಳೆಯಿತು.
ಸ್ವಾತಿ ಸೂರಜ್ ಪ್ರಾರ್ಥಿಸಿದರು. ಸಮುದಾಯ ಸಂಪನ್ಮೂಲ ವ್ಯಕ್ತಿ ಸಂಧ್ಯಾ ಸ್ವಾಗತಿಸಿದರು. ಕೃಷಿ ಸಖಿ ಸುಮಾ ಸಂಜಯ್ ಕಾರ್ಯಕ್ರಮ ನಿರೂಪಿಸಿದರು. ಪಶುಸಖಿ ಆಶಿಕಾ ವಂದಿಸಿದರು.









































































































