


ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯ ಬದಿಗೆ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 76 ವರ್ಷದ ವೃದ್ಧರೊಬ್ಬರು ಮೃತಪಟ್ಟ ಘಟನೆ ನ.3ರಂದು ಸಂಜೆ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಲಾವತ್ತಡ್ಕದಲ್ಲಿ ನಡೆದಿದೆ.
ಮೃತರನ್ನು ಮಂಜುನಾಥ ಕೊಠಾರಿ(76) ಎಂದು ಗುರುತಿಸಲಾಗಿದೆ.
ಮಂಜುನಾಥ ಕೊಠಾರಿ ಅವರ ಪುತ್ರ ರಾಘವೇಂದ್ರ ಕೊಠಾರಿ ಅವರು ಕಾರನ್ನು ಚಲಾಯಿಸುತ್ತಿದ್ದು, ಕಾರಿನಲ್ಲಿ ತಂದೆ ಮಂಜುನಾಥ ಕೊಠಾರಿ, ತಾಯಿ ರತ್ನಾವತಿ ಹಾಗೂ ಅವರ ಸ್ನೇಹಿತ ಬಾಲಚಂದ್ರ ಕುಲಾಲ್(47) ಪ್ರಯಾಣಿಸುತ್ತಿದ್ದರು. ಇವರು ಸಿದ್ದಾಪುರದಿಂದ ಹಾಸನಕ್ಕೆ ತೆರಳುತ್ತಿದ್ದ ವೇಳೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನ. 3ರಂದು ಸಂಜೆ ಸುಮಾರು 7.15ರ ವೇಳೆಗೆ ಇಚಿಲಂಪಾಡಿ ಗ್ರಾಮದ ಲಾವತ್ತಡ್ಕ ತಲುಪಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದಿದೆ.
ಅಪಘಾತದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಕಾರಿನೊಳಗೆ ಸಿಲುಕಿದ್ದವರನ್ನು ಹೊರತೆಗೆದು ನೆರವು ನೀಡಿದ್ದಾರೆ. ಘಟನೆಯಲ್ಲಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಂಜುನಾಥ ಕೊಠಾರಿ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದರೆ, ಕಾರು ಚಾಲಕ ರಾಘವೇಂದ್ರ ಕೊಠಾರಿ, ರತ್ನಾವತಿ ಮತ್ತು ಬಾಲಚಂದ್ರ ಕುಲಾಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ ಕೊಠಾರಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಉಳಿದವರು ಹೊರರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಕುರಿತು ಬಾಲಚಂದ್ರ ಕುಲಾಲ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








































































































