



ಕಡಬ: ಸುಮಾರು ಮೂರು ವರ್ಷಗಳಿಂದ ಪರಿಚಯವಿದ್ದ ಯುವತಿಯ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಘಟನೆ ಬಿಸಿಲೆ ಘಾಟಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಪ್ರಕರಣದ ದೂರುದಾರ ಯುವತಿಯು ಸುಮಾರು ಮೂರು ವರ್ಷಗಳಿಂದ ಕಡಬ ತಾಲೂಕಿನ ಕೊಣಾಜೆ ಗ್ರಾಮದ ಪ್ರಸಾದ್ ಎಂಬಾತನ ಪರಿಚಯ ಹೊಂದಿದ್ದು, ಸ್ನೇಹದಿಂದಿದ್ದರು. ನ.4ರಂದು ಸಂಜೆ ಆರೋಪಿತ ಪ್ರಸಾದ್ ಯುವತಿಯನ್ನು ಉಪ್ಪಿನಂಗಡಿಯಿಂದ ಕಾರಿನಲ್ಲಿ ಕರೆದುಕೊಂಡು ಕುಲ್ಕುಂದ ಮಾರ್ಗವಾಗಿ ಬಿಸಿಲೆ ಘಾಟಿ ಕಡೆಗೆ ತೆರಳಿದ್ದಾನೆ. ರಾತ್ರಿ ವೇಳೆ ದಾರಿಮಧ್ಯೆ ಯುವತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯ ತೀವ್ರತೆಗೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ನ.5ರಂದು ಬೆಳಿಗ್ಗೆ ಪ್ರಜ್ಞೆ ಮರಳಿದ ಬಳಿಕ ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. ಶೂನ್ಯ 01/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 118(1), 109(1)ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೃತ್ಯ ನಡೆದ ಸ್ಥಳವು ಹಾಸನ ಜಿಲ್ಲೆಯ ಯೆಸಳೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಯೆಸಳೂರು ಠಾಣೆಗೆ ವರ್ಗಾಯಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಯೆಸಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.








































































































