


ನೆಲ್ಯಾಡಿ: ಸಮೀಪದ ಕೌಕ್ರಾಡಿ ಗ್ರಾಮದ ದೊಂತಿಲ ಎಂಬಲ್ಲಿ ನ.4ರಂದು ಮಧ್ಯಾಹ್ನ ಇಕೋ ಕಾರೊಂದು ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ನೆಲ್ಯಾಡಿ–ಬಲ್ಯ ರಸ್ತೆಯಲ್ಲಿ ನೆಲ್ಯಾಡಿಯಿಂದ ಬಲ್ಯ ಕಡೆಗೆ ಬಲ್ಯ ನಿವಾಸಿ ಸುಂದರ ಆಳ್ವ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಇಕೋ ಕಾರು ದೊಂತಿಲ ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಗೆ ಟ್ರಾನ್ಸ್ಫಾರ್ಮರ್ನ ಒಂದು ವಿದ್ಯುತ್ ಕಂಬ ತುಂಡಾಗಿ, ಕಂಬ ಹಾಗೂ ವಿದ್ಯುತ್ ತಂತಿಗಳು ಕಾರಿನ ಮೇಲೆ ಬಿದ್ದಿವೆ. ಘಟನೆ ನಡೆದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರೂ ತಕ್ಷಣವೇ ವಿದ್ಯುತ್ ಟ್ರಿಪ್ ಆಗಿ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಕಾರಿನಲ್ಲಿ ಚಾಲಕ ಸುಂದರ ಆಳ್ವ ಅವರೊಂದಿಗೆ ಪ್ರಯಾಣಿಸುತ್ತಿದ್ದ ಅವರ ಪತ್ನಿ ಹಾಗೂ ಸೊಸೆ ಕೂಡ ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ನೆಲ್ಯಾಡಿ ಮೆಸ್ಕಾಂ ಶಾಖೆಯ ಕಿರಿಯ ಎಂಜಿನಿಯರ್ ರಾಮಣ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯುತ್ ಕಂಬ ಮತ್ತು ತಂತಿಗಳ ದುರಸ್ತಿ ಕಾರ್ಯ ಕೈಗೊಂಡರು.








































































































