ಸದಸ್ಯರಿಗೆ ಶೇ.10 ಡಿವಿಡೆಂಡ್, ಲೀಟರ್ಗೆ 0.65 ಪೈಸೆ ಬೋನಸ್ ಘೋಷಣೆ





ಕೊಕ್ಕಡ: ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಕೌಕ್ರಾಡಿ ಸಂತ ಜೋನರ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಫಾಯಲ್ ಸ್ಟ್ರೆಲ್ಲಾ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಪ್ರಸ್ತುತ 199 ಸದಸ್ಯರನ್ನು ಹೊಂದಿದ್ದು, ರೂ.43,500 ಪಾಲು ಬಂಡವಾಳ ಹೊಂದಿದೆ. 2025–26ನೇ ಸಾಲಿನಲ್ಲಿ ಸಂಘವು ರೂ.2,53,158.97 ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ಸಂಘದ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 0.65 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಿಸಿದರು.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ ಗುಣಮಟ್ಟದ ಹಾಲು ಉತ್ಪಾದನೆಗೆ ಹಸುಗಳ ಆರೋಗ್ಯ ಹಾಗೂ ಪೋಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ರಾಸುಗಳಿಗೆ ಗರ್ಭಧಾರಣೆಯಾಗದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಚಿಕಿತ್ಸೆ, ಸಮತೋಲಿತ ಆಹಾರ, ಸಮರ್ಪಕ ನೀರು ಹಾಗೂ ಪೋಷಕಾಂಶಗಳ ಪೂರೈಕೆ ಕುರಿತು ಮಾಹಿತಿ ನೀಡಿದರು. ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಸುವುದರಿಂದ ರೈತರಿಗೆ ಉತ್ತಮ ಬೆಲೆ ದೊರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ ಹಾಲು ಪೂರೈಸಿದ ಎಲ್ಲ ಸದಸ್ಯರಿಗೆ ಸ್ಮರಣಿಕೆ ನೀಡಲಾಯಿತು.
ಜ್ಯೋತಿ, ವನಿತಾ, ಗುಲಾಬಿ ಹಾಗೂ ಚಿನ್ನಮ್ಮ ಪ್ರಾರ್ಥಿಸಿದರು. ಜಿ.ನಾರಾಯಣಗೌಡ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಫೆಲ್ಸಿ ವೇಗಸ್ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಶೇಷಪ್ಪ ಗೌಡ ವಂದಿಸಿದರು.









































































































