ಅಧ್ಯಕ್ಷರಾಗಿ ರೆ.ಫಾ.ಜೋಸೆಫ್ ಕುರಿಯಾಲಚೇರಿ| ಕಾರ್ಯದರ್ಶಿಯಾಗಿ ಮಧು ಎ.ಜೆ




ನೆಲ್ಯಾಡಿ: ಕ್ರೈಸ್ತ ಸಮುದಾಯಗಳು ಒಗ್ಗೂಡಿ ಪ್ರತಿವರ್ಷ ಸಂಭ್ರಮದಿಂದ ಆಚರಿಸುವ ಸಂಯುಕ್ತ ಕ್ರಿಸ್ಮಸ್ ಹಬ್ಬದ 2026ನೇ ಸಾಲಿನ ಆಚರಣೆಯ ಮೊದಲ ಪೂರ್ವಭಾವಿ ಸಭೆ ಭಾನುವಾರದಂದು ನೆಲ್ಯಾಡಿಯ ಸಂತ ಅಲ್ಫೋನ್ಸ ದೇವಾಲಯದಲ್ಲಿ ನಡೆಯಿತು.
ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ಅವರ ಅಧ್ಯಕ್ಷತೆಯಲ್ಲಿ ಸಂಯುಕ್ತ ಕ್ರಿಸ್ಮಸ್ ಆಚರಣೆ ಪೂರ್ವಭಾವಿ ಸಭೆಯು ನಡೆಯಿತು.
ಸಭೆಯಲ್ಲಿ ಕಳೆದ ವರುಷ ನಡೆದ ಸಂಯುಕ್ತ ಕ್ರಿಸ್ಮಸ್ ಆಚರಣೆಯ ಆಯವ್ಯಯವನ್ನು ಸಭೆಗೆ ಮಂಡಿಸಿ ಅನುಮೋದನೆ ಪಡೆದ ಬಳಿಕ. 2026ನೇ ಸಾಲಿನ ಸಂಯುಕ್ತ ಕ್ರಿಸ್ಮಸ್ ಆಚರಣೆಗಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರೆ.ಫಾ.ಜೋಸೆಫ್ ಕುರಿಯಾಲಚೇರಿ, ಉಪಾಧ್ಯಕ್ಷರಾಗಿ ರೆ.ಫಾ.ಶಿಬಿ ಪುದಿಯರ, ಸಂಚಾಲಕರಾಗಿ ರೆ.ಫಾ.ಹನಿ ಜೇಕಬ್, ಕಾರ್ಯದರ್ಶಿಯಾಗಿ ಮಧು ಎ.ಜೆ., ಕೋಶಾಧಿಕಾರಿಯಾಗಿ ಪೌಲ್ ಡಿಸೋಜಾ ಹಾಗೂ ಜೊತೆ ಕಾರ್ಯದರ್ಶಿಯಾಗಿ ಇವಾಂಜಲಿಸ್ಟ್ ಬಾಬುರಾಜ್ ಅವರನ್ನು ನೇಮಕ ಮಾಡಲಾಯಿತು.
ಇದರೊಂದಿಗೆ ಕ್ರಿಸ್ಮಸ್ ಹಬ್ಬದ ವಿವಿಧ ಕಾರ್ಯಕ್ರಮಗಳ ವ್ಯವಸ್ಥಿತ ಆಯೋಜನೆಗಾಗಿ ವಿವಿಧ ಉಪಸಮಿತಿಗಳನ್ನೂ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೆ.ಫಾ.ಜೋಸೆಫ್ ಕುರಿಯಾಲಚೇರಿ ಅವರು ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಸಂಯುಕ್ತ ಕ್ರಿಸ್ಮಸ್ ಆಚರಣೆಯನ್ನು ಎಲ್ಲರ ಸಹಕಾರ ಮತ್ತು ಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ನಡೆಸುವ ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ನೆಲ್ಯಾಡಿಯ ವಿವಿಧ ದೇವಾಲಯಗಳ ಧರ್ಮಗುರುಗಳು ಹಾಗೂ ದೇವಾಲಯಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಂತ ಅಲ್ಫೋನ್ಸ ಚರ್ಚ್ನ ಧರ್ಮಗುರು ರೆ.ಫಾ. ಶಾಜಿ ಮಾತ್ಯು ಸ್ವಾಗತಿಸಿದರು. ರೆ.ಫಾ.ಜೋಸೆಫ್ ಕಾಲಶೇರಿ ವಂದಿಸಿದರು.








































































































