ಸುಳ್ಯ ಕ್ಷೇತ್ರವನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸುವ ಭರವಸೆ | ಒಂದೇ ಸೇತುವೆಗೆ ಎರಡು ಬಾರಿ ಗುದ್ದಲಿಪೂಜೆ!
ನೆಲ್ಯಾಡಿ: ನೆಲ್ಯಾಡಿ ಗ್ರಾಮದ ನೆಲ್ಯಾಡಿಬೈಲು ಎಂಬಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸೇತುವೆಗೆ ವಿಧಾನಪರಿಷತ್ ಸದಸ್ಯ ಪಿ.ವಿ.ಮೋಹನ್ ಅವರು ನ.21ರಂದು ಸಂಜೆ ಗುದ್ದಲಿಪೂಜೆ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೆಲ್ಯಾಡಿಬೈಲಿನಲ್ಲಿರುವ ಪ್ರಸ್ತುತ ಕಿರು ಸೇತುವೆ ಸುಮಾರು 35 ವರ್ಷಗಳ ಹಿಂದೆ ವಿನಯಕುಮಾರ್ ಸೊರಕೆ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ನಿರ್ಮಾಣಗೊಂಡಿತ್ತು. ಕಳೆದ 35 ವರ್ಷಗಳಿಂದ ಈ ಭಾಗವನ್ನು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದರೂ ಹೊಸ ಸೇತುವೆ ನಿರ್ಮಾಣದ ಬೇಡಿಕೆ ಈಡೇರಿರಲಿಲ್ಲ. ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯ ಯುವಕರು ಹಾಗೂ ನಾಗರಿಕರು ಸಮಿತಿ ರಚಿಸಿಕೊಂಡು ನಿರಂತರ ಹೋರಾಟ ನಡೆಸಿದ್ದಾರೆ. ಇದೀಗ ತಮ್ಮ ಮನವಿಗೆ ಸ್ಪಂದಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸ ಸೇತುವೆ ನಿರ್ಮಾಣಕ್ಕೆ 60 ಲಕ್ಷ ರೂ. ಅನುದಾನ ಒದಗಿಸಿದ್ದಾರೆ. ಜನರ ಬಹುವರ್ಷಗಳ ಬೇಡಿಕೆಗೆ ಸ್ಪಂದನೆ ದೊರೆತಿದ್ದು, ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿ ಎಂದರು.
ಸುಳ್ಯ ಕ್ಷೇತ್ರವನ್ನು ದತ್ತು ಸ್ವೀಕರಿಸುವೆ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ಬಿಜೆಪಿ ಶಾಸಕರಿದ್ದರೂ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗಿಲ್ಲ. ಈ ಭಾಗದವರೇ ಆದ ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ ಅವರಂತಹ ಪ್ರಭಾವಿ ನಾಯಕರು ಇದ್ದರೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳ ಕೊರತೆ ಎದ್ದು ಕಾಣುತ್ತಿದೆ. ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳು ಸಾಕಷ್ಟು ಅಭಿವೃದ್ಧಿ ಹೊಂದಿದ್ದರೂ ಸುಳ್ಯ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೀರಾವರಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ದತ್ತು ಸ್ವೀಕರಿಸಿ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ಮಾಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಜನರಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಪಿ.ವಿ.ಮೋಹನ್ ಹೇಳಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ: ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತಲೂ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸಬೇಕು. ರೋಬೋಟಿಕ್ಸ್, ಇ-ಲರ್ನಿಂಗ್ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಹಾಗೂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಸುಳ್ಯ ಕ್ಷೇತ್ರದ ಸರ್ಕಾರಿ ಶಾಲೆಗಳ ಸಮಗ್ರ ಸುಧಾರಣೆಗೆ ವಿಶೇಷ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.
ಕ್ಷೇತ್ರದ ಆರೋಗ್ಯ ಸೇವೆಗಳ ಸುಧಾರಣೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಅಂತರ್ಜಲ ಸಂರಕ್ಷಣೆ ಹಾಗೂ ನೀರಿನ ಮೂಲಗಳ ರಕ್ಷಣೆಗೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು. ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳ ಕೊರತೆ, ಬಸ್ ನಿಲ್ದಾಣದ ದುಸ್ಥಿತಿ ಹಾಗೂ ಮೂಲಸೌಕರ್ಯಗಳ ಅಭಾವವನ್ನು ಗಮನಿಸಿದರೆ ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ಕೇವಲ ತೇಪೆ ಕಾಮಗಾರಿಗಳಿಂದ ಶಾಶ್ವತ ಅಭಿವೃದ್ಧಿ ಸಾಧ್ಯವಿಲ್ಲ. ಜನರಿಗೆ ಅನುಕೂಲವಾಗುವ ಗಟ್ಟಿಮುಟ್ಟಾದ ಯೋಜನೆಗಳು ಅನುಷ್ಠಾನಗೊಳ್ಳಬೇಕು. ಸರ್ಕಾರದ ಅನುದಾನದ ಜತೆಗೆ ಕೈಗಾರಿಕೆ ಹಾಗೂ ಉದ್ಯಮ ಸಂಸ್ಥೆಗಳ ಸಿಎಸ್‌ಆರ್ ನಿಧಿಯನ್ನೂ ಸಮರ್ಪಕವಾಗಿ ಬಳಸಿಕೊಂಡು ಸರ್ಕಾರಿ ಶಾಲೆಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬಹುದು. ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷಭೇದಕ್ಕೆ ಅವಕಾಶವಿರಬಾರದು. ಜನರ ಅಗತ್ಯತೆ ಮತ್ತು ಮಕ್ಕಳ ಭವಿಷ್ಯಕ್ಕೆ ಬೇಕಾದ ಸೌಲಭ್ಯಗಳೇ ಮುಖ್ಯವಾಗಬೇಕು. ಜನರ ನ್ಯಾಯಯುತ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು.
ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳ ಪ್ರಯತ್ನ: ಅಭಿಲಾಷ್ ಪಿ.ಕೆ. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ. ಮಾತನಾಡಿ, ನೆಲ್ಯಾಡಿಬೈಲು ಸೇತುವೆ ನಿರ್ಮಾಣಕ್ಕಾಗಿ ಈ ಭಾಗದ ಜನಪ್ರತಿನಿಧಿಗಳು, ಯುವಕರು ಹಾಗೂ ಸ್ಥಳೀಯ ನಾಯಕರು ಹಲವು ವರ್ಷಗಳಿಂದ ಪ್ರಯತ್ನ ನಡೆಸಿದ್ದಾರೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಶ್ರಮಿಸಿ ಸೇತುವೆ ಕಾಮಗಾರಿಯನ್ನು ಮಳೆಹಾನಿ ಯೋಜನೆಯಲ್ಲಿ ಸೇರ್ಪಡೆಗೊಳಿಸಿ, ಅಂದಾಜು ಪಟ್ಟಿ ಸಿದ್ಧಪಡಿಸಿ ಅನುಮೋದನೆ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಸುಮಾರು 35 ವರ್ಷಗಳಿಂದ ಬಿಜೆಪಿ ಶಾಸಕರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಸೇತುವೆ ನಿರ್ಮಾಣಕ್ಕೆ ಅಗತ್ಯವಾದ ಮುತುವರ್ಜಿ ವಹಿಸಿರಲಿಲ್ಲ. ಇದೀಗ ಅನುದಾನ ಬಿಡುಗಡೆಯಾದ ಬಳಿಕ ಗುದ್ದಲಿಪೂಜೆ ನೆರವೇರಿಸಿ ಪ್ರಚಾರ ಪಡೆಯುವ ಪ್ರಯತ್ನ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಗಳಿಗಿಂತ ಫ್ಲೆಕ್ಸ್ ಹಾಗೂ ಪ್ರಚಾರಕ್ಕೆ ಆದ್ಯತೆ ನೀಡುವ ಮನೋಭಾವ ಬದಲಾಗಬೇಕು. ಪಿ.ವಿ.ಮೋಹನ್ ಅವರು ಜನರ ಬೇಡಿಕೆಗಳಿಗೆ ಸ್ಪಂದಿಸಿ ಕ್ಷೇತ್ರದ ಅಭಿವೃದ್ಧಿಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿದ್ದಾರೆ ಎಂದರು.
ಸೇತುವೆ ಕಾಮಗಾರಿ ಆರಂಭವಾದ ಬಳಿಕ ಸಂಚಾರಕ್ಕೆ ತಾತ್ಕಾಲಿಕ ಅಡಚಣೆಗಳು ಎದುರಾಗಬಹುದು. ಸಾರ್ವಜನಿಕರು ಸಹಕರಿಸಬೇಕು. ಅನುಮೋದನೆಗೊಂಡ ಕಾಮಗಾರಿಗೆ ಯಾರೂ ಅಡ್ಡಿಪಡಿಸದೆ ಶೀಘ್ರ ಪೂರ್ಣಗೊಳ್ಳಲು ಕೈಜೋಡಿಸಬೇಕು. ರಾಜಕೀಯ ಭೇದ ಮರೆತು ಗ್ರಾಮದ ಜನರು, ವಿವಿಧ ಪಕ್ಷಗಳ ಮುಖಂಡರು ಹಾಗೂ ಹೋರಾಟ ಸಮಿತಿಯ ಸದಸ್ಯರು ಒಂದೇ ವೇದಿಕೆಯಲ್ಲಿ ಸೇರಿರುವುದು ಸಂತಸದ ವಿಚಾರ. ಜನರಿಗೆ ಬೇಕಾಗಿರುವುದು ರಾಜಕೀಯವಲ್ಲ, ಊರಿನ ಅಭಿವೃದ್ಧಿ. ಕಾಮಗಾರಿ ಪೂರ್ಣಗೊಳ್ಳುವವರೆಗೂ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ಪಿ.ವಿ.ಮೋಹನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ನಿರ್ದೇಶಕ ಸರ್ವೋತ್ತಮ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫೈಝಲ್, ಕಾಂಗ್ರೆಸ್ ನೆಲ್ಯಾಡಿ ಗ್ರಾಮ ಸಮಿತಿ ಅಧ್ಯಕ್ಷ ಜೋಸ್ ಕೆ.ಜೆ., ಶಿರಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕಾರ್ತಿಕೇಯನ್, ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಸುಬ್ರಹ್ಮಣ್ಯ ಶಬರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭೂ ನ್ಯಾಯ ಮಂಡಳಿ ಸದಸ್ಯ ಹಾಗೂ ನೋಟರಿ ವಕೀಲ ಇಸ್ಮಾಯಿಲ್ ನೆಲ್ಯಾಡಿ ವಂದಿಸಿದರು.
ಭೂ ನ್ಯಾಯ ಮಂಡಳಿ ಸದಸ್ಯ ಕೆ.ಪಿ.ಅಬ್ರಹಾಂ, ನೆಲ್ಯಾಡಿ ಶಿಲ್ಪಾ ಕನ್‌ಸ್ಟ್ರಕ್ಷನ್ ಮಾಲಕ ಹಾಗೂ ಇಂಜಿನಿಯರ್ ಶಿವಣ್ಣ ಹೆಗ್ಡೆ, ಕೆಡಿಪಿ ಸದಸ್ಯೆ ಉಷಾ ಜೋಯಿ, ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕೇಶವ ಗೌಡ ಪುಚ್ಚೇರಿ, ಮಾಜಿ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಮಾಜಿ ಸದಸ್ಯ ಮಹಮ್ಮದ್ ಇಕ್ಬಾಲ್, ಸೀತಾರಾಮ ಗೌಡ ಕಾನಮನೆ, ಸತೀಶ್ ಪಳಿಕೆ, ಗಣೇಶ್ ಆಚಾರ್ಯ ಪೊಸೊಳಿಕೆ, ಪ್ರೆಸ್ಸಿ, ನಾಝೀಂ ಸಾಹೇಬ್, ಗುತ್ತಿಗೆದಾರ ಶಿವಪ್ರಕಾಶ್, ಜಿಮ್ಸನ್ ಗುಂಡ್ಯ, ಸಂತೋಷ್‌ಕುಮಾರ್ ಶೆಟ್ಟಿ, ಇಂಜಿನಿಯರ್ ಮನೋಜ್ ಮೊದಲಾದವರು ಉಪಸ್ಥಿತರಿದ್ದರು.
ಒಂದೇ ಸೇತುವೆಗೆ ಎರಡು ಬಾರಿ ಗುದ್ದಲಿಪೂಜೆ! ನೆಲ್ಯಾಡಿಬೈಲು ಹೊಸ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ನಿಂದ 40 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರದ ಎಸ್‌ಡಿಆರ್‌ಎಫ್‌ನಿಂದ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿ ಸ್ಥಳೀಯ ಬಿಜೆಪಿ ಮುಖಂಡರ ನೇತೃತ್ವದಲ್ಲಿ ನ.16ರಂದು ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದರು. ಮಳೆಹಾನಿ ಯೋಜನೆಯಡಿ 60 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ತಮ್ಮ ಪ್ರಯತ್ನದಿಂದಲೇ ಇದು ಸಾಧ್ಯವಾಗಿದೆ ಎಂದು ತಿಳಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನ.21ರಂದು ವಿಧಾನಪರಿಷತ್ ಸದಸ್ಯ ಪಿ.ವಿ.ಮೋಹನ್ ಅವರಿಂದ ಮತ್ತೊಮ್ಮೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಈ ಮೂಲಕ ಒಂದೇ ಸೇತುವೆ ಕಾಮಗಾರಿಗೆ ಐದು ದಿನಗಳ ಅಂತರದಲ್ಲಿ ಎರಡು ಬಾರಿ ಗುದ್ದಲಿಪೂಜೆ ನಡೆದಂತಾಗಿದೆ. ಎರಡೂ ಪಕ್ಷಗಳ ಮುಖಂಡರ ಫ್ಲೆಕ್ಸ್‌ಗಳು ಸೇತುವೆ ಪರಿಸರದಲ್ಲಿ ರಾರಾಜಿಸುತ್ತಿವೆ. ರಾಜಕೀಯ ಪಕ್ಷಗಳ ನಡುವೆ ಅನುದಾನದ ಕ್ರೆಡಿಟ್ ಪಡೆಯುವ ಪೈಪೋಟಿ ನಡೆದಿದ್ದರೂ, ಜನರ ಬಹುವರ್ಷಗಳ ಬೇಡಿಕೆಯಾಗಿರುವ ಸೇತುವೆ ಕಾಮಗಾರಿ ಯಾವುದೇ ವಿಳಂಬವಿಲ್ಲದೆ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿ ಎಂಬುದು ಸ್ಥಳೀಯರ ಆಶಯವಾಗಿದೆ.
ಅಪಾಯಕಾರಿ ಸ್ಥಿತಿಯಲ್ಲಿ ಹಳೆಯ ಸೇತುವೆ: ನೆಲ್ಯಾಡಿ ಪೇಟೆಯಿಂದ ಪಡುಬೆಟ್ಟು ಭಾಗಕ್ಕೆ ಸಂಪರ್ಕ ಕಲ್ಪಿಸುವ ನೆಲ್ಯಾಡಿಬೈಲಿನಲ್ಲಿರುವ ಪ್ರಸ್ತುತ ಕಿರು ಸೇತುವೆ ಅಗಲ ಕಿರಿದಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಸೇತುವೆಯ ಕಾಂಕ್ರೀಟ್ ಕಿತ್ತುಹೋಗಿ ಕಬ್ಬಿಣದ ಸರಳುಗಳು ಕಾಣಿಸುತ್ತಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಸೇತುವೆಯ ಬಗ್ಗೆ ಈ ಹಿಂದೆ ವರದಿಯೂ ಪ್ರಕಟವಾಗಿತ್ತು. ಹೊಸ ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯರು ಹೋರಾಟ ಸಮಿತಿ ರಚಿಸಿಕೊಂಡು ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಹೋರಾಟ ನಡೆಸಿದ್ದರು. ಇದೀಗ 60 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಸೇತುವೆ ನಿರ್ಮಾಣದ ಕಾರ್ಯಕ್ಕೆ ಚಾಲನೆ ದೊರೆತಿದೆ.