







ಕಡಬ: ಆರೋಗ್ಯಕರ ಹಾಗೂ ಸುಸ್ಥಿರ ಸಮಾಜ ನಿರ್ಮಾಣದ ಸಂದೇಶದೊಂದಿಗೆ ಜೇಸಿಐ ಕಡಬ ಕದಂಬದ ವತಿಯಿಂದ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ತಾಲೂಕು ಘಟಕದ ಸಹಯೋಗದೊಂದಿಗೆ ಹೊಸಮಠದಿಂದ ಕಡಬದವರೆಗೆ ಕಾಲ್ನಡಿಗೆ ಜಾಥಾ ಬುಧವಾರ ನಡೆಯಿತು.
ಹೊಸಮಠ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಎನ್. ಕರುಣಾಕರ ಗೋಗಟೆ ಅವರು ಹೊಸಮಠ ಪೇಟೆಯಲ್ಲಿ ಜಾಥಾಕ್ಕೆ ಚಾಲನೆ ನೀಡಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕಡಬ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ. ಕಡಬದಲ್ಲಿ ಜೇಸಿ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರ್ಬಿಐ ಕರೆನ್ಸಿ ಪ್ರೆಸ್, ಮೈಸೂರು ಇದರ ನಿವೃತ್ತ ಪ್ರಧಾನ ವ್ಯವಸ್ಥಾಪಕ ಪಿ. ವಿಲ್ಸನ್ ಅವರು ಶುಭ ಹಾರೈಸಿದರು. ಜೇಸಿಐ ಕಡಬ ಕದಂಬದ ಅಧ್ಯಕ್ಷ ಜೇಮ್ಸ್ ಕ್ರಿಶಲ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಜೇಸಿ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ. ಅತಿಥಿಗಳಾಗಿ ಆಗಮಿಸಿದ್ದರು. ಜೇಸಿ ನಿಕಟಪೂರ್ವ ಅಧ್ಯಕ್ಷೆ ವಿಶ್ರುತ ರಾಜೇಶ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಪ್ತಾಹ ನಿರ್ದೇಶಕ ಜೋಮೋನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕುಡಿಯುವ ನೀರಿನ ಗಾಜಿನ ಬಾಟಲಿಗಳನ್ನು ಮಾಜಿ ಸೈನಿಕರು ಹಾಗೂ ಕಡಬ ಆರಕ್ಷಕ ಠಾಣಾ ಸಿಬ್ಬಂದಿಗಳಿಗೆ ವಿತರಿಸಲಾಯಿತು. ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿ, ವಂದಿಸಿದರು.









































































































