






ನೆಲ್ಯಾಡಿ: ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸೆ.10ರಂದು ಸಂಜೆ ಶಿರಾಡಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಆಗಬಹುದಾದ ಸಾಧಕ ಬಾಧಕಗಳ ಬಗ್ಗೆ ತಿಳಿಸಿದರು. ಯೋಜನೆ ವಿರುದ್ಧ ಪ್ರತಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಯುತ್ತಿದ್ದು ಮುಂದಿನ ಹಂತದಲ್ಲಿ ಕಡಬದಲ್ಲಿ ದೊಡ್ಡ ಮಟ್ಟದ ಸಮಾವೇಶ, ಸಹಾಯಕ ಆಯುಕ್ತರ ಕಚೇರಿ ಚಲೋ, ಗುಂಡ್ಯದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ. ಇದೊಂದು ರೈತ ಕಾರ್ಯಕರ್ತರ ಹೋರಾಟವಾಗಿದೆ ಎಂದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆ ಜಿಲ್ಲಾ ಪ್ರಮುಖ್ ದಾಮೋದರ ಗುಂಡ್ಯ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ತಾಲೂಕು ಪ್ರಮುಖ್ ಶ್ರೀಕಾಂತ ಶಿರಾಡಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುಧಾಕರ, ಶಿರಾಡಿ ಗ್ರಾ.ಪಂ.ಮಾಜಿ ಸದಸ್ಯರಾದ ಪ್ರಕಾಶ್ ಗುಂಡ್ಯ, ರಾಜೇಶ್ ಅಮ್ಮಾಜೆ, ಲಕ್ಷ್ಮಣ ಗೌಡ ಕುದ್ಕೋಳಿ, ಪ್ರಮುಖರಾದ ವೆಂಕಟ್ರಮಣ ಕಳಪ್ಪಾರು, ಡೊಂಬಯ್ಯ ಗೌಡ ಕಳಪ್ಪಾರು, ಗ್ರೇಸಿ ಚಾಕೋ ಶಿರಾಡಿ, ಸುಮಿತ್ರ ಉದನೆ, ಸುಬ್ರಹ್ಮಣ್ಯ ಭಟ್ ಮುಂಡಾಜೆ, ದಾಮೋದರ ಕಳಪ್ಪಾರು ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಯೋಜನೆ ಜಾರಿ ವಿರೋಧಿಸಿ ಪಿಡಿಒ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.









































































































