




ಶಿಶಿಲ: ಗ್ರಾಮದ ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.23ರಂದು ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಅವರ ಪತ್ನಿ ಚಿನ್ನಮ್ಮ (ಚಿತ್ರಾವತಿ) ಅವರ ಮೃತದೇಹ ಮನೆಯ ಪಕ್ಕದ ಜಮೀನಿನಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಇದೀಗ ಪತಿಯೂ ಮೃತಪಟ್ಟಿರುವುದು ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ಎರಡು-ಮೂರು ದಿನಗಳಿಂದ ತನಿಯಪ್ಪ ಗೌಡ ಅವರು ಎಲ್ಲಿಯೂ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ಕುಶಾಲಪ್ಪ ಗೌಡ ಬದ್ರಿಜಾಲು, ಸುಬ್ರಾಯ ಗೌಡ ಬದ್ರಿಜಾಲು ಹಾಗೂ ಶೀನಪ್ಪ ನಾಯ್ಕ ಮುಚ್ಚಿರಡ್ಕ ಅವರು ಹುಡುಕಾಟ ನಡೆಸಿದಾಗ, ತನಿಯಪ್ಪ ಗೌಡ ಅವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇತ್ತೀಚೆಗೆ ಅವರ ಪತ್ನಿ ಚಿನ್ನಮ್ಮ (ಚಿತ್ರಾವತಿ) ಅವರ ಮೃತದೇಹ ಮನೆಯ ಪಕ್ಕದ ಜಮೀನಿನಲ್ಲಿರುವ ಕೆರೆಯಲ್ಲಿ ಪತ್ತೆಯಾಗಿತ್ತು. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನಮ್ಮ ಅವರ ಸಹೋದರ ಗಂಗಾಧರ ಗೌಡ ಅವರು, ಮೃತರ ಸಾವಿನಲ್ಲಿ ಸಂಶಯವಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.
ಇದೀಗ ಪತಿ ತನಿಯಪ್ಪ ಗೌಡ ಅವರ ಮೃತದೇಹವೂ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಪತ್ನಿಯ ಸಾವಿನ ಐದು ದಿನಗಳ ಬಳಿಕ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿನ್ನೆಲೆಯಲ್ಲಿ, ಎರಡೂ ಸಾವುಗಳಿಗೆ ಪರಸ್ಪರ ಸಂಬಂಧವಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಘಟನೆಯ ಕುರಿತು ಧರ್ಮಸ್ಥಳ ಪೊಲೀಸರು ತನಿಖೆ ಮುಂದುವರಿಸಿದ್ದು, ಎರಡೂ ಪ್ರಕರಣಗಳ ನಿಖರ ಹಿನ್ನೆಲೆ ಹಾಗೂ ಸಾವಿಗೆ ಕಾರಣವೇನು ಎಂಬುದರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮೃತರು ಮಕ್ಕಳಾದ ಸತ್ಯಶ್ರೀ ಹಾಗೂ ಆದಿತ್ಯ ಅವರನ್ನು ಅಗಲಿದ್ದಾರೆ.









































































































