


ನೆಲ್ಯಾಡಿ: ಕಡಬ ತಾಲೂಕಿನ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಸೊಂಟದ ಕೀಲು ಬದಲಾವಣೆ (ಟೋಟಲ್ ಹಿಪ್ ರಿಪ್ಲೇಸ್ಮೆಂಟ್) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಸಾಧನೆಯು ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಸ್ಥಳೀಯವಾಗಿಯೇ ಪಡೆಯಲು ಹೊಸ ಅವಕಾಶ ಕಲ್ಪಿಸಿದೆ.
ಈ ಮಹತ್ವದ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಶರತ್ ಬಾಳೆಮನೆ, ಡಾ. ಶಮಂತ್ ವೈ.ಕೆ. ಹಾಗೂ ಡಾ.ಇಜಾಜ್ ಎಂ.ಎಸ್. ಭಾಗವಹಿಸಿದ್ದರು. ಅನಸ್ತೇಶಿಯಾ ತಜ್ಞರಾದ ಡಾ.ಎಸ್.ಎಂ.ಪ್ರಸಾದ್ ಅವರು ಅರಿವಳಿಕೆ ಸೇವೆ ಒದಗಿಸಿದರು. ಇಂಪ್ಲಾಂಟ್ ತಂತ್ರಜ್ಞರಾದ ಸತೀಶ್ ಮತ್ತು ವೆಂಕಟ್ ಅವರು ತಾಂತ್ರಿಕ ಸಹಕಾರ ನೀಡಿದರು. ಆಸ್ಪತ್ರೆಯ ಆಪರೇಷನ್ ಥಿಯೇಟರ್ನ ಶುಶ್ರೂಷಕಿಯರಾದ ಲೀಲಾವತಿ, ವಸಂತಿ, ಆಶಾ ಮತ್ತು ಶರ್ಲಿ ಅವರು ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಸಹಕರಿಸಿದರು.
ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುರಳೀಧರ ಅವರು ಅಶ್ವಿನಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸ್ಥಳೀಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ನಿರಂತರ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಪೂರ್ಣ ಸೊಂಟದ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯಂತಹ ವಿಶೇಷ ಚಿಕಿತ್ಸೆಗಳು ಸಾಮಾನ್ಯವಾಗಿ ದೊಡ್ಡ ನಗರಗಳ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತವೆ. ಇಂತಹ ಚಿಕಿತ್ಸಾ ಸೌಲಭ್ಯಗಳು ಸ್ಥಳೀಯವಾಗಿಯೇ ಲಭ್ಯವಾಗುವುದರಿಂದ ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ. ವಿಶೇಷಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳಿಗಾಗಿ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮೀಣ ಪ್ರದೇಶದ ಜನರಿಗೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಅಶ್ವಿನಿ ಆಸ್ಪತ್ರೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.








































































































