


ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಡಬ ತಾಲೂಕು, ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯು ಹೊಸಮಜಲು ಪ್ರಾಥಮಿಕ ಶಾಲೆಯಲ್ಲಿ ಒಕ್ಕೂಟದ ಅಧ್ಯಕ್ಷೆ ಜಯಂತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೌಕ್ರಾಡಿ ಒಕ್ಕೂಟದ ಸೇವಾಪ್ರತಿನಿಧಿ ನಮಿತಾ ಎಸ್. ಶೆಟ್ಟಿ ಅವರು ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೌಕ್ರಾಡಿ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಅವರನ್ನು ಸತತ ನಾಲ್ಕು ವರ್ಷಗಳ ಕಾಲ ಒಕ್ಕೂಟವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ ಅವರ ನಾಯಕತ್ವ, ಪ್ರಾಮಾಣಿಕ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶೌರ್ಯ ಘಟಕದ ತಾಲೂಕು ಕ್ಯಾಪ್ಟನ್ ರಮೇಶ್ ಬಾಣಜಾಲು ಅವರು ಬಾಲಕೃಷ್ಣ ಗೌಡರು ಕಳೆದ ನಾಲ್ಕು ವರ್ಷಗಳಲ್ಲಿ ಸಲ್ಲಿಸಿದ ಸೇವೆ ಹಾಗೂ ಕೈಗೊಂಡ ಉತ್ತಮ ಕಾರ್ಯಗಳ ಕುರಿತು ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಉಪಸಮಿತಿ ಹಾಗೂ ದಾಖಲಾತಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದವರನ್ನು ಒಕ್ಕೂಟದ ವತಿಯಿಂದ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಶ್ರೀಧರ್, ನವ್ಯಾ ಪ್ರಸಾದ್, ವಸಂತಿ ಹಾಗೂ ಸುರೇಶ್ ಉಪಸ್ಥಿತರಿದ್ದರು.
ತ್ರೈಮಾಸಿಕ ಸಭೆಯ ಜವಾಬ್ದಾರಿಯನ್ನು ದುರ್ಗಾಶ್ರೀ ತಂಡದ ಸದಸ್ಯರು ವಹಿಸಿಕೊಂಡಿದ್ದರು. ತಂಡದ ವರದಿಯನ್ನು ಸದಸ್ಯೆ ಸುಮನ ವಾಚಿಸಿದರು. ಸಭೆಯಲ್ಲಿ ಒಕ್ಕೂಟದ ಉಪಸಮಿತಿ ಹಾಗೂ ದಾಖಲಾತಿ ಸಮಿತಿಯ ಸದಸ್ಯರು, ಎಲ್ಲಾ ತಂಡಗಳ ಪ್ರಬಂಧಕರು, ಸಂಯೋಜಕರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ನವ್ಯಾ ಪ್ರಸಾದ್ ನಿರೂಪಿಸಿದರು. ಜವಾಬ್ದಾರಿ ತಂಡದ ಸದಸ್ಯೆ ಚಂದ್ರಿಕಾ ಸ್ವಾಗತಿಸಿದರು, ಗೀತಾ ವಂದಿಸಿದರು.








































































































