





ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮೂಡುಬೈಲು ಪರಕೆ ಎಂಬಲ್ಲಿ ಶನಿವಾರ ಕೆಎಸ್ಆರ್ಟಿಸಿ ಬಸ್ ಹಾಗೂ ಟಾಟಾ ಸಫಾರಿ ಕಾರು ಮುಖಾಮುಖಿ ಡಿಕ್ಕಿಯಾಗಿ, ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದವರಿಗೆ ಗಾಯಗಳಾದ ಘಟನೆ ನಡೆದಿದೆ.
ಧರ್ಮಸ್ಥಳ ಘಟಕದ ಕೆಎಸ್ಆರ್ಟಿಸಿ ಬಸ್ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳಿ, ಅಲ್ಲಿಂದ ಪ್ರಯಾಣಿಕರನ್ನು ಕೂರಿಸಿಕೊಂಡು ಪೆರಿಯಶಾಂತಿ–ಕೊಕ್ಕಡ ಮಾರ್ಗವಾಗಿ ಧರ್ಮಸ್ಥಳದತ್ತ ತೆರಳುತ್ತಿತ್ತು. ಬಸ್ ಚಾಲಕರಾಗಿ ಕೊಯ್ಯೂರು ಗ್ರಾಮದ ಯತೀಶ್ ಕೆ. (32) ಹಾಗೂ ನಿರ್ವಾಹಕರಾಗಿ ಪರಸಪ್ಪ ಕಾಳಗಿ ಕರ್ತವ್ಯದಲ್ಲಿದ್ದರು.
ಮಧ್ಯಾಹ್ನ ಸುಮಾರು 11.50ರ ವೇಳೆಗೆ ಬಸ್ ಮೂಡುಬೈಲು ಪರಕೆ ತಲುಪಿದಾಗ, ಎದುರಿನಿಂದ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಟಾಟಾ ಸಫಾರಿ ಕಾರು ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡುವ ಸಂದರ್ಭದಲ್ಲಿ ಬಸ್ಸಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಗಾಯಗಳಾಗಿದ್ದು, ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ. ಅಪಘಾತದಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಟಾಟಾ ಸಫಾರಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಕಾರನ್ನು ಗೌತಮ್ ಸಿಂಗ್ ಎಂಬವರು ಚಲಾಯಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಅವರ ವಿರುದ್ಧ ಬಸ್ ಚಾಲಕ ಯತೀಶ್ ಕೆ. ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.









































































































