




ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಜೆಸಿಐ ಸಪ್ತಾಹದ ಅಂಗವಾಗಿ ಜೆಸಿ ಬಂಧುಗಳಿಗಾಗಿ ವಿವಿಧ ಮನೋರಂಜನಾ ಆಟೋಟ ಸ್ಪರ್ಧೆಗಳು, ಮಾತಿನೊಂದಿಗೆ ರುಚಿ ಹಾಗೂ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿ ಬಂಧುಗಳು ಉತ್ಸಾಹದಿಂದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಆಟೋಟಗಳ ಮೂಲಕ ಸದಸ್ಯರ ನಡುವೆ ಪರಸ್ಪರ ಆತ್ಮೀಯತೆ, ಸ್ನೇಹ ಹಾಗೂ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಸುಧಾಕರ್ ವಹಿಸಿ ಸ್ವಾಗತಿಸಿದರು
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ‘ಮಾತಿನೊಂದಿಗೆ ರುಚಿ’ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷರು ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅನುಭವಿಸಿದ ಸಿಹಿ ಹಾಗೂ ಮರೆಯಲಾಗದ ಘಟನೆಗಳನ್ನು ಆತ್ಮೀಯವಾಗಿ ಹಂಚಿಕೊಂಡರು. ಅವರ ಅನುಭವಗಳು, ನೆನಪುಗಳು ಹಾಗೂ ಮಾರ್ಗದರ್ಶನವು ಪ್ರಸ್ತುತ ಸದಸ್ಯರಿಗೆ ಸ್ಪೂರ್ತಿದಾಯಕವಾಗಿತ್ತು. ಮನೆಯಲ್ಲಿ ತಯಾರಿಸಿದ ವಿವಿಧ ರುಚಿಕರ ಆಹಾರ ಪದಾರ್ಥಗಳನ್ನು ಸದಸ್ಯರು ಪರಸ್ಪರ ಹಂಚಿಕೊಂಡು, ಮಾತಿನೊಂದಿಗೆ ರುಚಿಯ ಸವಿಯನ್ನೂ ಅನುಭವಿಸಿದರು.
ಇದೇ ಸಂದರ್ಭದಲ್ಲಿ ‘ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ’ ವಿಷಯದ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ಪ್ರೊವಿಷನಲ್ ತರಬೇತುದಾರ ಜೆಸಿ ಜಿತೇಶ್ ರೈ ಅವರು ತರಬೇತಿ ನೀಡಿದರು. ವೃತ್ತಿಜೀವನದ ಜವಾಬ್ದಾರಿಗಳೊಂದಿಗೆ ವೈಯಕ್ತಿಕ ಜೀವನವನ್ನು ಸಮತೋಲನದಿಂದ ನಿರ್ವಹಿಸುವುದು, ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಹಾಗೂ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಅವರು ಉಪಯುಕ್ತ ಮಾಹಿತಿ ನೀಡಿದರು.
ಜಾಹ್ನವಿ ಜೆಸಿವಾಣಿ ವಾಚಸಿದರು. ತರಬೇತುದಾರರ ಪರಿಚಯವನ್ನು ಸಾಯಿ ದೃತಿ ಮಾಡಿದರು. ಪ್ರಶಾಂತ್ ಕುಮಾರ್ ಅವರು ವೇದಿಕೆಗೆ ಆಹ್ವಾನಿಸಿದರು. ಸುಪ್ರೀತಾ ರವಿಚಂದ್ರ ವಂದಿಸಿದರು.









































































































