


ಕೊಕ್ಕಡ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಗವಾನ್ 1008 ಶ್ರೀ ವರ್ಧಮಾನ ಮಹಾವೀರ ಸ್ವಾಮಿಯ ನಿರ್ವಾಣ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಭಗವಾನ್ ಮಹಾವೀರ ಸ್ವಾಮಿಗೆ ನಾರಿಕೇಲಾಭಿಷೇಕ, ಗಂಧಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಶ್ರೀ ಮಹಾಮಾತೆ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ರಕ್ಷಾವಳಿ ಆರತಿ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನಡೆಯಿತು.
ಜೈನ ಧರ್ಮದ ಇತಿಹಾಸದಲ್ಲಿ ವಿಶೇಷ ಮಹತ್ವ ಹೊಂದಿರುವ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಭಗವಾನ್ ಶ್ರೀ ಮಹಾವೀರ ಸ್ವಾಮಿಯವರು ನಿರ್ವಾಣ ಮೋಕ್ಷವನ್ನು ಹೊಂದಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಪವಿತ್ರ ದಿನವನ್ನು ಜೈನ ಸಮುದಾಯದವರು ದೀಪಾವಳಿಯಾಗಿ ಆಚರಿಸುತ್ತಾರೆ. ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಪಸರಿಸುವ ಮಹಾವೀರರ ಸಂದೇಶವನ್ನು ಸ್ಮರಿಸುವ ದಿನವಾಗಿ ನಿರ್ವಾಣ ಕಲ್ಯಾಣೋತ್ಸವವನ್ನು ಆಚರಿಸಲಾಗುತ್ತದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಾನ್ ಮಹಾವೀರ ಸ್ವಾಮಿಯ ಕೃಪೆಗೆ ಪಾತ್ರರಾದರು.








































































































