


ನೆಲ್ಯಾಡಿ: ಸುಮಾರು 80 ವರ್ಷಗಳಿಂದ ಸಾರ್ವಜನಿಕರ ಸಂಚಾರಕ್ಕೆ ಬಳಕೆಯಾಗುತ್ತಿರುವ ಗೌಡಸಾಗು–ಬರೆಗುಡ್ಡೆ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಗೆ ಎದುರಾಗಿರುವ ಅಡೆತಡೆಯನ್ನು ನಿವಾರಿಸಿ, ಸ್ಥಗಿತಗೊಂಡಿರುವ ಕಾಮಗಾರಿಯನ್ನು ಶೀಘ್ರವಾಗಿ ಪುನರಾರಂಭಿಸುವಂತೆ ಆಗ್ರಹಿಸಿ ಕೌಕ್ರಾಡಿ–ನೆಲ್ಯಾಡಿ ಗ್ರಾಮ ಪಂಚಾಯತ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಊರ ನಾಗರಿಕರ ಪರವಾಗಿ ಮನವಿ ಸಲ್ಲಿಸಲಾಯಿತು.
ಗೌಡಸಾಗು–ಬರೆಗುಡ್ಡೆ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಊರ ನಾಗರಿಕರು ಸುದೀರ್ಘ ಹೋರಾಟ ನಡೆಸಿದ ಪರಿಣಾಮ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಗೆ ಮಂಜೂರಾತಿ ದೊರೆತಿತ್ತು. ಅದರಂತೆ ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ಆರಂಭಿಸಲು ಮುಂದಾಗಿತ್ತು. ಆದರೆ ರಸ್ತೆಯ ಜಾಗದ ಮಾಲೀಕತ್ವದ ಕುರಿತು ವ್ಯಕ್ತಿಯೊಬ್ಬರು ತಕರಾರು ಎತ್ತಿದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕಾರ್ಯ ಅರ್ಧದಲ್ಲೇ ನಿಂತು ಸಾರ್ವಜನಿಕರಿಗೆ ಮತ್ತೆ ಸಮಸ್ಯೆ ಎದುರಾಗಿದೆ.
ಈ ಕುರಿತು ಸಲ್ಲಿಸಲಾದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ, ರಸ್ತೆಗೆ ಸಂಬಂಧಿಸಿದ ವಾಸ್ತವಾಂಶಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಬಳಿಕ ಹೆದ್ದಾರಿ ಪ್ರಾಧಿಕಾರಕ್ಕೆ ಅಧಿಕೃತ ಪತ್ರ ಬರೆದು, ಸ್ಥಗಿತಗೊಂಡಿರುವ ಕಾಂಕ್ರೀಟೀಕರಣ ಕಾಮಗಾರಿಯನ್ನು ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಅಬೂಬಕ್ಕರ್ ಸಿದ್ದೀಕ್ ಅವರ ನೇತೃತ್ವದಲ್ಲಿ ನಡೆದ ಮನವಿ ಸಲ್ಲಿಕೆ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದು, ಸುಮಾರು ಎಂಟು ದಶಕಗಳಿಂದ ಸಾರ್ವಜನಿಕರು ಬಳಸಿಕೊಂಡು ಬರುತ್ತಿರುವ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಮಂಜೂರಾಗಿರುವ ಕಾಮಗಾರಿಯನ್ನು ಯಾವುದೇ ವಿಳಂಬವಿಲ್ಲದೆ ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.








































































































