ಉಚಿತ ಆರೋಗ್ಯ ಶಿಬಿರ; ಸಮೃದ್ಧಿ ತೆಂಗಿನ ಎಣ್ಣೆ ಮಾರುಕಟ್ಟೆಗೆ ಬಿಡುಗಡೆ – ಕೃಷಿಕ ಸಾಧಕರಿಗೆ ಸನ್ಮಾನ
ಕೊಕ್ಕಡ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ–2026ರ ಅಂಗವಾಗಿ ಮಂಗಳವಾರದಂದು ನಿಡ್ಲೆ ಕೇಂದ್ರ ಕಚೇರಿಯಲ್ಲಿ ಸಹಕಾರ ಸಪ್ತಾಹ ಆಚರಣೆ ನಡೆಯಿತು. ಈ ಪ್ರಯುಕ್ತ ಎ.ಜೆ. ಮೆಡಿಕಲ್ ಸೈನ್ಸಸ್ ಸಂಸ್ಥೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಸಹಕಾರ ಸಪ್ತಾಹದ ಧ್ವಜಾರೋಹಣವನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಧನಂಜಯ ಗೌಡ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಅವರು ಸಂಘದ ನೂತನ ಉತ್ಪನ್ನವಾದ ‘ಸಮೃದ್ಧಿ’ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಶಾಲಪ್ಪ ಗೌಡ ಪೂವಾಜೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಸಾರ್ವಜನಿಕರು ವಿವಿಧ ದಾಖಲೆಗಳಿಗಾಗಿ ಒಂದು ಬ್ಯಾಂಕ್ನಿಂದ ಮತ್ತೊಂದು ಬ್ಯಾಂಕ್ಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಗಳು ಬಡವರು ಹಾಗೂ ಸಾಮಾನ್ಯ ಜನರ ಪಾಲಿಗೆ ಆಸರೆಯಾಗಬೇಕು. ಸುಲಭವಾಗಿ ಸಾಲ ಸೌಲಭ್ಯ ಒದಗಿಸುವುದರ ಜತೆಗೆ ಜನರ ಆರ್ಥಿಕ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಗ್ರಾಮೀಣ ಭಾಗದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಸಾಲ ಪಡೆದವರು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು. ನಿಡ್ಲೆ ಸಹಕಾರಿ ಸಂಘವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಮಾಜಿ ಅಧ್ಯಕ್ಷ ರಮೇಶ್ ರಾವ್ ಅವರು ತಮ್ಮ ಅವಧಿಯಲ್ಲಿ ಸಂಸ್ಥೆಯನ್ನು ಉತ್ತಮ ಹಂತಕ್ಕೆ ತಲುಪಿಸಲು ಮಹತ್ವದ ಶ್ರಮ ವಹಿಸಿದ್ದು, ಈಗಿನ ಆಡಳಿತ ಮಂಡಳಿಯೂ ಅದೇ ರೀತಿಯ ಜನಪರ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣ ಗೌಡ ಪಾಂಗಳ ಅವರಿಗೆ ಖಾಯಂ ಠೇವಣಿ ಪತ್ರ ವಿತರಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಹೊನ್ನಪ್ಪ ಗೌಡ ಮೇರ್ಲ ಬರೆಂಗಾಯ, ಡೀಕಯ್ಯ ಗೌಡ ಬಂಡೇರಿ, ಸುಂದರ ಪೂಜಾರಿ ನೇರೆಂಕಿಪಾಲು ಹಾಗೂ ಸುಧೀಂದ್ರ ರಾವ್ ಕೋಂಕ ನಿಡ್ಲೆ ಅವರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ನಿಡ್ಲೆ ಸಹಕಾರಿ ಸಂಘದ ಉಪಾಧ್ಯಕ್ಷ ಡೀಕಯ್ಯ ಎಂ.ಕೆ., ಕಾಯರ್ತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಎಚ್., ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರೀಶ್ ರಾವ್ ಕೆ., ಬರೆಂಗಾಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಗೌಡ ಕೆ., ಬೂಡುಜಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಿಥುನ್ ಕೆ., ನಿಡ್ಲೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ, ಸಂಘದ ಮಾಜಿ ಅಧ್ಯಕ್ಷ ರಮೇಶ್ ರಾವ್ ಕೆ., ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಎ.ಜೆ. ಆಸ್ಪತ್ರೆಯ ಶ್ರುತಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ವಿಜಯ ಕುಮಾರ್ ಹೆಚ್., ಆನಂದ ಗೌಡ, ರಮೇಶ್ ರಾವ್ ಕೆ., ಹೇಮಂತ ಗೌಡ ಕೆ., ಜಯರಾಮ ಪಾಳಂದೆ ಎಸ್., ಧನಂಜಯ ಬಿ., ಗಾಯತ್ರಿ ಹೆಚ್. ಗೌಡ, ವಿಜಯಲಕ್ಷ್ಮೀ ಕೆ., ರಾಜು ಹಾಗೂ ಮೋಹನ ಪೂಜಾರಿ ಉಪಸ್ಥಿತರಿದ್ದರು.
ನಿರ್ದೇಶಕಿ ಗಾಯತ್ರಿ ಹೆಚ್. ಗೌಡ ಪ್ರಾರ್ಥಿಸಿದರು. ರಮೇಶ್ ರಾವ್ ಕೆ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಗೌಡ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ವಿಜಯಲಕ್ಷ್ಮೀ ಕೆ. ವಂದಿಸಿದರು. ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.