




ನೆಲ್ಯಾಡಿ: ಮಂಗಳೂರು ಶಾಲಾ ಶಿಕ್ಷಣ ಇಲಾಖೆ ಹಾಗೂ ಕುಲಶೇಖರದ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಕಾಂಚನ ಪ್ರೌಢಶಾಲೆಯ 17 ವಯೋಮಾನದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾಂಚನ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. 10ನೇ ತರಗತಿಯ ವೈಶಾಖ್ ಜಿ. ಹಾಗೂ ಪ್ರೀತಂ, 9ನೇ ತರಗತಿಯ ತನುಷ್ ಎಸ್., ರಿತೇಶ್ ಮತ್ತು ಗೌತಮ್ ಅವರು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯಶಿಕ್ಷಕ ರಾಧಾಕೃಷ್ಣ ಎಸ್. ಅವರ ಮಾರ್ಗದರ್ಶನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ಕೆ. ಅವರ ತರಬೇತಿ ಮಹತ್ವದ ಪಾತ್ರ ವಹಿಸಿದೆ. ಎಸ್.ಡಿ.ಎಂ. ಸ್ಪೋರ್ಟ್ಸ್ ಕ್ಲಬ್ ಹಾಗೂ ಎಸ್.ಡಿ.ಎಂ. ಆಡಳಿತ ಮಂಡಳಿಯ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ನೀಡಲಾಗುತ್ತಿದ್ದು, ಅದರ ಫಲವಾಗಿ ತಂಡ ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವಂತಾಗಿದೆ. ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.









































































































