




ನೆಲ್ಯಾಡಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 76ನೇ ವರ್ಷದ ಜನ್ಮದಿನದ ಅಂಗವಾಗಿ ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ದೇವರ ಮುಂಭಾಗದಲ್ಲಿ ದೀಪ ಹಣತೆಗಳನ್ನು ಸಾಮೂಹಿಕವಾಗಿ ಬೆಳಗಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಆಯುರಾರೋಗ್ಯ, ಉತ್ತಮ ಆಡಳಿತ ನಡೆಸುವ ಶಕ್ತಿಯನ್ನು ಹಾಗೂ ದೇಶದ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ನೂಜಿನ್ನಾಯ ಅವರು ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶದ ಜನರ ಸೇವೆಗಾಗಿ ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯ ದೊರೆಯಲಿ ಎಂದು ಪ್ರಾರ್ಥಿಸಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀ ದೇವರು ಆಯುರಾರೋಗ್ಯ ಕರುಣಿಸಲಿ. ದೇಶದ ಅಭಿವೃದ್ಧಿ ಹಾಗೂ ಜನಕಲ್ಯಾಣಕ್ಕಾಗಿ ಅವರು ಉತ್ತಮ ಆಡಳಿತವನ್ನು ಮುಂದುವರಿಸಲು ಇನ್ನಷ್ಟು ಶಕ್ತಿ ಮತ್ತು ಮಾರ್ಗದರ್ಶನ ದೊರೆಯಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಅಶ್ವಥ್ ನಾರಾಯಣ, ಪ್ರಧಾನ ಕಾರ್ಯದರ್ಶಿ ರಾಕೇಶ್, ಕೋಶಾಧಿಕಾರಿ ಸುಧೀರ್ ಕುಮಾರ್ ಸೇರಿದಂತೆ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.









































































































