ನೆಲ್ಯಾಡಿ ಯು-ಟರ್ನ್, ಸರ್ವೀಸ್ ರಸ್ತೆ ಅಗಲೀಕರಣಕ್ಕೆ ಆಗ್ರಹ | ಆಸ್ಪತ್ರೆ ಮೇಲ್ದರ್ಜೆ, ಕಾಲೇಜು ಉಳಿಸಲು ನಿರ್ಣಯ
ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ–ಬಿ.ಸಿ.ರೋಡ್ ಚತುಷ್ಪಥ ಕಾಮಗಾರಿ ವೇಳೆ ನೆಲ್ಯಾಡಿ ಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿದೆ. ಇದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಕೌಕ್ರಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕನ್ಸಲ್ಟೆಂಟ್ ಇಂಜಿನಿಯರ್ ಪದ್ಮಪ್ರಸಾದ್ ಮಾಹಿತಿ ನೀಡುತ್ತಿದ್ದಂತೆ ಗ್ರಾಮಸ್ಥರು ಹೆದ್ದಾರಿ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ನೆಲ್ಯಾಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಯು-ಟರ್ನ್ ನಿರ್ಮಿಸದಿರುವುದರಿಂದ ಮಂಗಳೂರು ಮತ್ತು ಬೆಂಗಳೂರಿನಿಂದ ಬರುವ ಬಸ್ಗಳು ನಿಲ್ದಾಣಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಗೌಡಸಾಗು ಸಹಿತ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮ ಪಂಚಾಯಿತಿ ರಸ್ತೆಗಳ ಕಾಂಕ್ರೀಟೀಕರಣ, ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ನೆಲ್ಯಾಡಿ ಪೇಟೆಯಲ್ಲಿ ಸರ್ವೀಸ್ ರಸ್ತೆ ಅಗಲೀಕರಣಕ್ಕೆ ಗ್ರಾಮಸ್ಥರು ಒತ್ತಾಯಿಸಿದರು. ಹೊಸಮಜಲು ಶಾಲೆಯ ಬಳಿ ತಡೆಗೋಡೆ, ಸುರಕ್ಷಿತ ರಸ್ತೆ ಸಂಪರ್ಕ ಹಾಗೂ ಸ್ಕೈವಾಕ್ ನಿರ್ಮಾಣಕ್ಕೂ ಆಗ್ರಹಿಸಿದರು. ಬೇಡಿಕೆಗಳ ಪಟ್ಟಿಯನ್ನು ನೀಡಿದರೆ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರ ಗಮನಕ್ಕೆ ತರುವುದಾಗಿ ಪದ್ಮಪ್ರಸಾದ್ ತಿಳಿಸಿದರು.
ಆಸ್ಪತ್ರೆ ಮೇಲ್ದರ್ಜೆಗೆ ಮನವಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಜೂರಾದ 23 ಹುದ್ದೆಗಳ ಪೈಕಿ 12 ಹುದ್ದೆಗಳು ಖಾಲಿಯಿದ್ದು, ದಿನವೊಂದಕ್ಕೆ 100ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ. ಶಿಶಿರ ತಿಳಿಸಿದರು. ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಹಾಗೂ ನೆಲ್ಯಾಡಿಗೆ 108 ಆ್ಯಂಬುಲೆನ್ಸ್ ಒದಗಿಸಲು ಸರಕಾರಕ್ಕೆ ಮನವಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.
ಶಾಂತಿಬೆಟ್ಟುವಿನಲ್ಲಿ ಹೊಸ ಅಂಗನವಾಡಿ ಆರಂಭಿಸಲು ಸರ್ವೆ ನಡೆಸುವುದಾಗಿ ಸಿಡಿಪಿಒ ಹರೀಶ್ ಭರವಸೆ ನೀಡಿದರು. ಕೌಕ್ರಾಡಿ ಚರ್ಚ್ ಅಂಗನವಾಡಿಯ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವುದು, ಹೊಸಮಜಲು ಸರಕಾರಿ ಶಾಲೆಯ ಕೊಠಡಿಗಳ ಕೊರತೆ ನೀಗಿಸುವುದು, ಕಟ್ಟಡ ದುರಸ್ತಿ ಹಾಗೂ ಆವರಣಗೋಡೆ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಯಿತು.
ಕಾಲೇಜು ಸ್ಥಳಾಂತರಕ್ಕೆ ವಿರೋಧ ಮಂಗಳೂರು ವಿಶ್ವವಿದ್ಯಾಲಯದ ನೆಲ್ಯಾಡಿ ಘಟಕ ಕಾಲೇಜನ್ನು ಕಡಬಕ್ಕೆ ಸ್ಥಳಾಂತರಿಸುವ ವಿಚಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಕಾಲೇಜನ್ನು ನೆಲ್ಯಾಡಿಯಲ್ಲೇ ಉಳಿಸುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಿದರು. ಪಂಚಾಯಿತಿಯ ಮೆಸ್ಕಾಂ ವಿದ್ಯುತ್ ಬಾಕಿ ಮನ್ನಾ, ಹಾಗೂ ನೆಲ್ಯಾಡಿಯಲ್ಲಿ ಆಟೋರಿಕ್ಷಾಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಯಿತು.
ಜಾನ್ಸನ್ ಕಾಪಿನಬಾಗಿಲು, ಎಂ.ಕೆ. ಇಬ್ರಾಹಿಂ, ಕೆ.ಇ. ಅಬೂಬಕ್ಕರ್, ವರ್ಗೀಸ್ ಅಬ್ರಹಾಂ, ಕೆ.ಎಂ. ಹನೀಫ್, ಅಬೂಬಕ್ಕರ್ ಸಿದ್ದೀಕ್, ಇಸ್ಮಾಯಿಲ್, ರಫೀಕ್ ಬೈಲು, ವಿಶ್ವನಾಥ, ರಮೇಶ್ ಬಾಣಜಾಲು ಮತ್ತಿತರರು ಭಾಗವಹಿಸಿ ಅವ್ಯವಸ್ಥೆ ಕುರಿತು ಇಲಾಖಾಧಿಕಾರಿಯವರ ಗಮನ ಸೆಳೆದು ಆಕ್ರೋಶ ವ್ಯಕ್ತಪಡಿಸಿದರು. ಪಿಡಿಒ ಮೋಹನ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ದೇವಿಕಾ ವಂದಿಸಿದರು.
ಅಧಿಕಾರಿಗಳ ಗೈರುಹಾಜರಿ: ಮುಂದೂಡಿಕೆಯಾಗಿದ್ದ ಸಭೆ ಸೆ.19ರಂದು ನಿಗದಿಯಾಗಿದ್ದ ಗ್ರಾಮಸಭೆಗೆ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆಎಸ್ಆರ್ಟಿಸಿ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಅ.6ಕ್ಕೆ ಮುಂದೂಡಲಾಗಿತ್ತು. ಈ ಬಾರಿ ಬಹುತೇಕ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದು, ಸಂಜೆ 4 ಗಂಟೆಯವರೆಗೆ ಸಭೆ ನಡೆಯಿತು.