


ನೆಲ್ಯಾಡಿ: ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಅಂಗವಾಗಿ 60 ದಿನಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಸೋಮವಾರ ವೃಶ್ಚಿಕ ಸಂಕ್ರಮಣದ ಪವಿತ್ರ ದಿನದಂದು ಚಾಲನೆ ನೀಡಲಾಯಿತು.
ಮಕರ ಸಂಕ್ರಮಣದವರೆಗೆ ಪ್ರತಿದಿನ ಸಂಜೆ ದೇವಸ್ಥಾನದಲ್ಲಿ ಭಜನಾ ಸೇವೆ, ರಂಗಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಧಾರ್ಮಿಕ ಕಾರ್ಯಕ್ರಮಗಳ ಆರಂಭದ ಅಂಗವಾಗಿ ಸೋಮವಾರ ಬೆಳಗ್ಗೆ ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ಗಣಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕರಾದ ಶ್ರೀಧರ ನೂಜಿನ್ನಾಯ ಹಾಗೂ ಅಶ್ವಥ್ ಭಟ್ ಅವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಂಡವು.
ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಮುಂದಿನ 60 ದಿನಗಳ ಕಾಲ ಪ್ರತಿದಿನ ಸಂಜೆ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಭಜನಾ ಸೇವೆ ಹಾಗೂ ರಂಗಪೂಜೆ ನಡೆಯಲಿದೆ.
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಸುಪ್ರೀತಾ ರವಿಚಂದ್ರ ಹೊಸವಕ್ಲು, ಪ್ರಧಾನ ಕಾರ್ಯದರ್ಶಿ ರಾಕೇಶ್ ಎಸ್. ಗೌಡ, ಜೊತೆ ಕಾರ್ಯದರ್ಶಿ ರಮೇಶ್ ಬಾಣಜಾಲು, ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪುರುಷೋತ್ತಮ ಶೆಟ್ಟಿ ಕೊಲ್ಯೊಟ್ಟು ಅವರು ಹಲಸಿನ ಮರದಿಂದ ವಿಶೇಷವಾಗಿ ತಯಾರಿಸಿದ ಪೀಠವನ್ನು ಶ್ರೀ ಕ್ಷೇತ್ರಕ್ಕೆ ಭಕ್ತಿಪೂರ್ವಕವಾಗಿ ಕೊಡುಗೆಯಾಗಿ ಸಮರ್ಪಿಸಿದರು.








































































































