₹60 ಲಕ್ಷ ಅನುದಾನದಲ್ಲಿ ನೂತನ ಸೇತುವೆ ನಿರ್ಮಾಣ; ನೆಲ್ಯಾಡಿ ಗ್ರಾಮಕ್ಕೆ ಈಗಾಗಲೇ ₹2 ಕೋಟಿಗೂ ಅಧಿಕ ಅನುದಾನ: ಶಾಸಕಿ
ನೆಲ್ಯಾಡಿ: ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ನೆಲ್ಯಾಡಿ ಪೇಟೆಯಿಂದ ಪಡುಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನೆಲ್ಯಾಡಿ ಬೈಲು ಎಂಬಲ್ಲಿ ಕೇಂದ್ರ ಸರ್ಕಾರದ ಎನ್ಡಿಆರ್ಎಫ್ನಿಂದ ₹40 ಲಕ್ಷ ಹಾಗೂ ರಾಜ್ಯ ಸರ್ಕಾರದ ಎಸ್ಡಿಆರ್ಎಫ್ನಿಂದ ₹20 ಲಕ್ಷ ಸೇರಿದಂತೆ ಒಟ್ಟು ₹60 ಲಕ್ಷ ಅನುದಾನದಲ್ಲಿ ನಿರ್ಮಾಣ ಆಗಲಿರುವ ನೂತನ ಸೇತುವೆ ಕಾಮಗಾರಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು ಶಾಸಕರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಸರ್ಕಾರಕ್ಕೆ ಮನವಿ ಸಲ್ಲಿಸಿದ ಕೂಡಲೇ ಅನುದಾನ ದೊರೆಯುವುದಿಲ್ಲ. ಅನುದಾನ ಬಿಡುಗಡೆಯಾಗಿರುವುದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ ಅರ್ಹತೆ ಎಲ್ಲರಿಗೂ ಇದೆ. ಆದರೆ ನಾನೇ ಮಾಡಿಸಿದ್ದು, ನಾನೇ ಅನುದಾನ ತಂದಿರುವುದು ಎಂದು ಹೇಳಿಕೊಳ್ಳುವುದು ಸರಿಯಲ್ಲ. ಲೋಕೋಪಯೋಗಿ ಇಲಾಖೆ ಸಚಿವರು ಶಾಸಕರ ಶಿಫಾರಸ್ಸಿನ ಮೇರೆಗೆ ಅನುದಾನ ಮಂಜೂರು ಮಾಡಿದ್ದಾರೆ. ಊರಿನವರೇ ಅಲ್ಲದ ಕೆಲವರು ನಾನೇ ಮಾಡಿಸಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಜನರು ನೈಜ ವಿಚಾರವನ್ನು ಅರಿತುಕೊಳ್ಳಬೇಕು. ಮೂರು ವರ್ಷದಿಂದ ಒಂದೇ ಒಂದು ಮನೆ ನೀಡಿಲ್ಲ. ಮೆಸ್ಕಾಂ ಗೆ ಹಣ ಪಾವತಿಸಲು ಸರಕಾರದಲ್ಲಿ ಹಣ ಇಲ್ಲ ಎಂದು ಹೇಳಿದರು.
ನಾನು ಶಾಸಕಿಯಾದ ಬಳಿಕ ನೆಲ್ಯಾಡಿ ಗ್ರಾಮಕ್ಕೆ ₹2 ಕೋಟಿಗೂ ಅಧಿಕ ಅನುದಾನ ಬಂದಿದೆ. ಇನ್ನಷ್ಟು ಅನುದಾನ ಶಾಸಕರ ನಿಧಿಯಿಂದ ಬಿಡುಗಡೆಯಾಗಲಿದೆ. ಗುತ್ತಿಗೆದಾರರಿಗೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸ್ಥಳೀಯರು ಸಹಕಾರ ನೀಡಬೇಕು. ರಾಜಕೀಯವನ್ನು ಬದಿಗಿಟ್ಟು ಸಂಘಟನಾತ್ಮಕವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದರು.
ಪಡುಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ಶಬರಾಯ, ಕೊಯಿಲ ಶಕ್ತಿ ಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ರಾಮನಗರ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಇಂಜಿನಿಯರ್ ಶಿವಣ್ಣ ಪಿ. ಹೆಗ್ಡೆ, ಬೂತ್ ಅಧ್ಯಕ್ಷ ವಿನೋದ್ ಕುಮಾರ್ ಬಾಕಿಜಾಲು, ಬೂತ್ ಕಾರ್ಯದರ್ಶಿ ಪ್ರಸನ್ನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ–ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉದಯ್ ಕುಮಾರ್, ನೆಲ್ಯಾಡಿ ವಲಯ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು, ಅನುರಾಧ, ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಿಲವೂರು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಮೇಶ್ ಶೆಟ್ಟಿ ಬೀದಿ, ಸುಂದರ ಗೌಡ ಅತ್ರಿಜಾಲು, ಗಿರೀಶ್ ಶೆಟ್ಟಿ ಬೀದಿ, ಎಸ್.ಸಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಿ ಎಳ್ತಿಮಾರು, ಸುಳ್ಯ ಮಂಡಲ ಒಬಿಸಿ ಮೋರ್ಚಾ ಸದಸ್ಯ ಉಮೇಶ್ ಪೂಜಾರಿ, ಬಾಲಕೃಷ್ಣ ತೋಟ, ವಿಶ್ವನಾಥ, ಗುಣಕರ, ಇಂಜಿನಿಯರ್ ಶೈಲೇಶ್ ಹೆಗ್ಡೆ, ಕಮಲಾಕ್ಷ ಪಂಡಿತ್, ಪಡುಬೆಟ್ಟು ಬೂತ್ ಅಧ್ಯಕ್ಷ ರಕ್ಷಿತ್ ಎಂ.ಟಿ., ಚಂದ್ರಶೇಖರ ಶೆಟ್ಟಿ ಪಟ್ಟೆ, ಪದ್ಮ ಕುಮಾರ್ ಸರಳಿಕೆರೆ, ರಜಾಕ್ ನೆಲ್ಯಾಡಿ ಬೈಲು, ಜಾನ್ ನೆಲ್ಯಾಡಿ ಬೈಲು, ತೋಮಸ್ ನೆಲ್ಯಾಡಿ ಬೈಲು, ದಿನೇಶ್ ಎಂ.ಟಿ., ವಿಕ್ಟರ್ ಸ್ಟೆಲ್ಲಾ ಪಡುಬೆಟ್ಟು, ವಿನಯ್ ಡಿಸೋಜ ಪಾಪಿನಮಂಡೆ ಮತ್ತಿತರರು ಉಪಸ್ಥಿತರಿದ್ದರು.
ವಿನೋದ್ ಕುಮಾರ್ ಬಾಕಿಜಾಲು ಸ್ವಾಗತಿಸಿದರು. ರವಿಚಂದ್ರ ಹೊಸವಕ್ಲು ಕಾರ್ಯಕ್ರಮ ನಿರೂಪಿಸಿದರು. ರವಿಪ್ರಸಾದ್ ಶೆಟ್ಟಿ ರಾಮನಗರ ವಂದಿಸಿದರು.