ಸಂವಿಧಾನದ ಅರಿವು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ: ವಂ.ಫಾ.ಸುನಿಲ್ ಐಸಾಕ್



ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್. ಬೆಳ್ತಂಗಡಿ ವತಿಯಿಂದ ನ.28ರಂದು ‘ಸಂವಿಧಾನ ಜಾಗೃತಿ–2026’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಫಾ. ಸುನಿಲ್ ಐಸಾಕ್ ಉದ್ಘಾಟಿಸಿ ಮಾತನಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಸಂವಿಧಾನದ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಆಶಯ, ಮೌಲ್ಯಗಳನ್ನು ಅರಿತು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲ ಆಯಾಜ್ ಆಫ್ರಿದ್ ಅವರು ಸಂವಿಧಾನದ ಅರಿವು ಅದರ ಮೌಲ್ಯಗಳು ಹಾಗೂ ಸಂವಿಧಾನದ ಬಗ್ಗೆ ನಾಗರಿಕರಿಗೆ ಇರುವ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಉಪನ್ಯಾಸಕಿ ಮೀನಾಕ್ಷಿ ಮಹಾಬಲ ಗೌಡ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಮತ್ತು ಮಹಿಳೆಯರ ಕೊಡುಗೆಯ ಕುರಿತು ವಿಚಾರ ಮಂಡಿಸಿದರು.
ಸಂಸ್ಥೆಯ ನಿರ್ದೇಶಕ ವಂ.ಫಾ.ಆದರ್ಶ್ ಪಿ.ಎಸ್. ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ಗುರುದೇವ ಕಾಲೇಜಿನ ಉಪಪ್ರಾಂಶುಪಾಲ ಶಮಿ ಉಲ್ಲಾ ಹಾಗೂ ವಿ.ಟಿ. ಸೆಬಾಸ್ಟಿನ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸ್ವಸಹಾಯ ಗುಂಪುಗಳ ಸದಸ್ಯರು ಹಾಗೂ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.








































































































