




ಬಂಟ್ವಾಳ: ತಾಲೂಕಿನ ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತೆಗೆದು ಟಿಪ್ಪರ್ ಲಾರಿಗಳಿಗೆ ತುಂಬಿಸುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸೆ.25ರಂದು ಮುಂಜಾನೆ ದಾಳಿ ನಡೆಸಿ, ಮೂರು ಟಿಪ್ಪರ್ ಲಾರಿ ಹಾಗೂ ಜೆಸಿಬಿ ಸಹಿತ ಸುಮಾರು ರೂ.25.24 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರನ್ನಗೌಡ ಪಾಟೀಲ ಅವರಿಗೆ ಕೆಳಗಿನ ತುಂಬೆ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಮೂರು ಟಿಪ್ಪರ್ ಲಾರಿ ಹಾಗೂ ಒಂದು ಜೆಸಿಬಿ ಪತ್ತೆಯಾಗಿದ್ದು, ಟಿಪ್ಪರ್ಗಳಲ್ಲಿ ಅಕ್ರಮವಾಗಿ ಮರಳು ತುಂಬಿರುವುದು ಕಂಡುಬಂದಿದೆ. ಪೊಲೀಸರು ದಾಳಿ ನಡೆಸಿ ಸ್ಥಳದಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದರು. ಮರಳು ತುಂಬಿದ್ದ ಮೂರು ಟಿಪ್ಪರ್ ಲಾರಿಗಳು ಮತ್ತು ಜೆಸಿಬಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಸುಮಾರು ಎರಡು ಲೋಡ್ ಟಿಪ್ಪರ್ ಪ್ರಮಾಣದ ಮರಳು ಹಾಗೂ ಮರಳು ಲೋಡ್ ಮಾಡಲು ಬಳಸುತ್ತಿದ್ದ ಸಾಮಗ್ರಿಗಳನ್ನೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ ಸುಮಾರು ರೂ.25,24,700 ಎಂದು ಪೊಲೀಸರು ತಿಳಿಸಿದ್ದಾರೆ.
ವಶಕ್ಕೆ ಪಡೆದವರನ್ನು ವಿಚಾರಿಸಿದಾಗ, ನದಿ ಕಿನಾರೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಲಾರಿಗಳಿಗೆ ತುಂಬಿಸಿ ಸಾಗಿಸುತ್ತಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನಿಹಾನ್, ರಾಜೀಕ್, ಮೊಹಮ್ಮದ್ ಶಂಶೀರ್, ಮಹಮ್ಮದ್ ಅಶ್ರಫ್, ಸ್ಟೀವನ್ ಡಿಸೋಜಾ ಹಾಗೂ ಕೃತ್ಯಕ್ಕೆ ಸಹಕರಿಸಿದ ರೈಟರ್ ಶಿವಪ್ರಸಾದ್ ಆಳ್ವ ಮತ್ತು ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.









































































































