




ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ನೆಲ್ಯಾಡಿ ಬಸ್ ನಿಲ್ದಾಣಕ್ಕೆ ಎಕ್ಸ್ಪ್ರೆಸ್ ಬಸ್ಗಳು ಪ್ರವೇಶಿಸದೆ ಓವರ್ಬ್ರಿಡ್ಜ್ ಮೂಲಕ ನೇರವಾಗಿ ಸಂಚರಿಸುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಎಕ್ಸ್ಪ್ರೆಸ್ ಹಾಗೂ ಸರ್ವಿಸ್ ಬಸ್ಗಳು ಬಸ್ ನಿಲ್ದಾಣಕ್ಕೆ ಪ್ರವೇಶಿಸಿ ಪ್ರಯಾಣಿಕರಿಗೆ ಸೇವೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್ಡಿಪಿಐ ನೆಲ್ಯಾಡಿ ಗ್ರಾಮ ಸಮಿತಿ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಚತುಷ್ಪಥ ಕಾಮಗಾರಿ ಪೂರ್ಣಗೊಂಡ ಬಳಿಕ ಕೆಲವು ಎಕ್ಸ್ಪ್ರೆಸ್ ಬಸ್ಗಳು ಸರ್ವಿಸ್ ರಸ್ತೆಗೆ ಬಾರದೆ ಓವರ್ಬ್ರಿಡ್ಜ್ ಮೂಲಕ ನೇರವಾಗಿ ಸಂಚರಿಸುತ್ತಿವೆ. ಇದರಿಂದ ಪ್ರಯಾಣಿಕರು ಬಸ್ ನಿಲ್ದಾಣದ ಬದಲಿಗೆ ಸರ್ವಿಸ್ ರಸ್ತೆ ಬದಿಯಲ್ಲಿ ನಿಂತು ಬಸ್ಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೆ ಇದರಿಂದ ಹೆಚ್ಚಿನ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನೆಲ್ಯಾಡಿ ಬಸ್ ನಿಲ್ದಾಣವನ್ನು ಸಮರ್ಪಕವಾಗಿ ಬಳಸುವಂತೆ ಎಕ್ಸ್ಪ್ರೆಸ್ ಹಾಗೂ ಸರ್ವಿಸ್ ಬಸ್ಗಳು ಸರ್ವಿಸ್ ರಸ್ತೆ ಮೂಲಕ ಸಂಚರಿಸಿ ನಿಲ್ದಾಣಕ್ಕೆ ಪ್ರವೇಶಿಸುವ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಸ್ಡಿಪಿಐ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಎಸ್ಡಿಪಿಐ ಕಡಬ–ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ಸಿದ್ದೀಕ್ ಎನ್., ನೆಲ್ಯಾಡಿ ಗ್ರಾಮ ಸಮಿತಿ ಕಾರ್ಯದರ್ಶಿ ಸಿದ್ದೀಕ್ ಎಂ., ಸದಸ್ಯರಾದ ಹನೀಫ್ ಬೈಲು ಹಾಗೂ ಮುಹಮ್ಮದ್ ರಫೀಕ್ ಅಪ್ಪಿ ಉಪಸ್ಥಿತರಿದ್ದರು.









































































































