




ಬಂಟ್ವಾಳ: ತಲವಾರು ಹಾಗೂ ಕಬ್ಬಿಣದ ರಾಡ್ನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ನಿವಾಸಿ ಪ್ರಶಾಂತ್ ಬೆಳ್ಚಾಡ್ (41) ಎಂಬವರು ಸೆ.20ರಂದು ಸಂಜೆ ಕಮ್ಮಾಜೆಯಲ್ಲಿದ್ದ ವೇಳೆ, ಅಟೋರಿಕ್ಷಾದಲ್ಲಿ ಬಂದ ಪರಿಚಯದ ಆರೋಪಿಗಳಾದ ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ (43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಎಂಬವರು ತಲವಾರು ಹಾಗೂ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯಿಂದ ಪ್ರಶಾಂತ್ ಬೆಳ್ಚಾಡ್ ಅವರಿಗೆ ತೀವ್ರ ರಕ್ತಗಾಯಗಳಾಗಿದ್ದು, ಪರಿಚಯದವರು ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಪ್ರಶಾಂತ್ ಅವರನ್ನು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಪ್ರಶಾಂತ್, ರಾಮದಾಸ್ ಹಾಗೂ ಶಂಕರ ಅವರನ್ನು ಬಂಧಿಸಿದ್ದಾರೆ. ಸೆ.25ರಂದು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಮೂವರನ್ನೂ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.









































































































