ಸೆ.29ರಂದು ಶಿಶಿಲ ವಾಲ್ಮೀಕಿ ಆಶ್ರಮ ಶಾಲೆ ಕಟ್ಟಡ ಉದ್ಘಾಟನೆ ವಿದ್ಯುತ್ ಕೈಕೊಟ್ಟರೆ ವಿದ್ಯಾರ್ಥಿಗಳಿಗೆ ಮಂದ ಬೆಳಕಿನಲ್ಲೇ ಪಾಠ
ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಆದಿವಾಸಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಿರುವ ಶಿಶಿಲದ ವಾಲ್ಮೀಕಿ ಆಶ್ರಮ ಶಾಲೆ ಕಟ್ಟಡ ಸೆ.29ರಂದು ಉದ್ಘಾ ಟನೆಗೊಳ್ಳಲಿದೆ. ಆದರೆ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಸತಿ ಸೌಲಭ್ಯ ಒಳಗೊಂಡ ಈ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳ ಕೊರತೆ ಇರುವುದು ಅಚ್ಚರಿ ಮೂಡಿಸಿದೆ.
ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿರುವ ಆದಿವಾಸಿ ಮಕ್ಕಳಿಗೆ ಶಿಕ್ಷಣದ ಅವಕಾಶ ವಿಸ್ತರಿಸುವ ಜತೆಗೆ ಸುರಕ್ಷಿತ ವಸತಿ, ಆಹಾರ, ಅಧ್ಯಯನ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ನೂತನ ಕಟ್ಟಡ ನಿರ್ಮಿಸಲಾಗಿದೆ.
ಶಿಶಿಲ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 109 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನೂತನ ಕಟ್ಟಡ ಉದ್ಘಾಟನೆಗೆ ಸಿದ್ದವಾಗಿದ್ದರೂ, ಹಳೆಯ ಕಟ್ಟಡದಲ್ಲಿದ್ದ 5 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಇನ್ವರ್ಟರ್ ವ್ಯವಸ್ಥೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿ ಸಿಲ್ಲ ಹೀಗಾಗಿ ವಿದ್ಯುತ್ ವ್ಯತ್ಯಯವಾದರೆ ಮಕ್ಕಳು ಮಂದ ಬೆಳಕಿನಲ್ಲಿಯೇ ಪಾಠಾಭ್ಯಾಸ ಹಾಗೂ ದೈನಂದಿನ ಚಟುವಟಿಕೆಗಳನ್ನು ನಡೆಸಬೇಕಾದ ಪರಿಸ್ಥಿತಿ ಇದೆ.
ಹಂಡೆಯಲ್ಲೇ ಬಿಸಿನೀರು!: ಶಾಲೆಯ ಸೋಲಾರ್ ಬಿಸಿನೀರಿನ ವ್ಯವಸ್ಥೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲಎನ್ನಲಾಗಿದೆ. ಪುಟ್ಟಮಕ್ಕಳಿಗೆ ಸ್ನಾನ ಮಾಡಲು ಹಂಡೆಯಲ್ಲಿ ನೀರು ಕಾಯಿಸಿ ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಸತಿ ಸಹಿತ ಶಾಲೆಯಲ್ಲಿ ಮೂಲಸೌಕಯ್ಯ ಕೊರತೆ ಮಕ್ಕಳಿಗೆ ತೊಂದರೆ ಉಂಟುಮಾಡುತ್ತಿದೆ.
ವಿದ್ಯಾರ್ಥಿಗಳು ಬಟ್ಟೆಬರೆಗಳನ್ನು ಜೋಡಿಸಿಡಲು ನೀಡಿರುವ ಟ್ರಂಕ್ಗಳು ಹಳೆಯದಾಗಿವೆ. ಶಿಕ್ಷಕರಿಗೆ ಟೇಬಲ್ ಹಾಗೂ ಕುರ್ಚಿಗಳ ಕೊರತೆಯೂ ಇದೆ. ಕಟ್ಟಡ ಸುತ್ತ ಇಂಟರ್ ಲಾಕ್ ಕಾಮಗಾರಿ ಬಾಕಿ ಇದೆ.
ಉದ್ಘಾಟನೆಗೂ ಮುನ್ನ ಸೌಲಭ್ಯ ಕಲ್ಪಿಸಲು ಆಗ್ರಹ 50 ವರ್ಷ ಹಳೆಯದಾದ ಶಿಶಿಲದ ಆಶ್ರಮ ಶಾಲೆ ಇದೀಗ ವಾಲ್ಮೀಕಿ ಆಶ್ರಮ ಶಾಲೆಯಾಗಿ ಸುಸಜ್ಜಿತ ನೂತನ ಕಟ್ಟಡ ಹೊಂದಿರುವುದು ಸಂತಸದ ವಿಚಾರ. ಆದರೆ ಮಕ್ಕಳಿಗೆ ಅಗತ್ಯವಿರುವ ಮೂಲಸೌಕಯ್ಯಗಳು ಸಮರ್ಪಕವಾಗಿ ಲಭ್ಯವಾಗದಿರುವುದು ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಸೆ.29ರಂದು ಉದ್ಘಾಟನೆ ನಡೆಯುವ ಮುನ್ನವೇ ಸೋಲಾರ್ ಇನ್ವರ್ಟರ್, ಬಿಸಿನೀರು ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿ, ಕಾಮಗಾರಿಯ ಲೋಪದೋಷಗಳನ್ನು ಸರಿಪಡಿಸಬೇಕು ಎಂಬುದು ಪೋಷಕರು ಹಾಗೂ ಗ್ರಾಮಸ್ಥರ ಒತ್ತಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ತುರ್ತು ಗಮನಹರಿಸಬೇಕಾಗಿದೆ.
ಕಾಮಗಾರಿ ಕಳಪೆ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿರುವ ಸಂದರ್ಭದಲ್ಲೇ ಪೈಪ್ ಗಳಲ್ಲಿ ಲೀಕೇಜ್, ನೇತಾಡುತ್ತಿರುವ ಟ್ಯೂಬ್ ಲೈಟ್ ಗಳು ಹಾಗೂ ಶೌಚಾಲಯಗಳಲ್ಲಿ ಅಳವಡಿಸಿದ ಪ್ಲಶ್ ಟ್ಯಾಂಕ್ ಗಳು ಕಿತ್ತುಹೋಗಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ ಮೂಡಿದೆ. ಕಟ್ಟಡದ ಕಾಮಗಾರಿಯನ್ನು ಸಮಗ್ರವಾಗಿ ಪರಿಶೀಲಿಸಿ, ಲೋಪದೋಷಗಳನ್ನು ಸರಿಪಡಿಸಿ ಬಳಿಕವೇ ಹಸ್ತಾಂತರಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಐವತ್ತು ವರ್ಷ ಹಳೆಯದಾದ ಆಶ್ರಮ ಶಾಲೆಗೆ 4ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿರುವುದು ಹೆಮ್ಮೆಯ ವಿಚಾರ. ಆದರೆ ಬೆಳಕು ಹಾಗೂ ಬಿಸಿನೀರಿನ ಸಮರ್ಪಕ ವ್ಯವಸ್ಥೆ ಇಲ್ಲದೆ ಪುಟ್ಟ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು, ಅದಕ್ಕೂ ಮುನ್ನ ಈ ಸಮಸ್ಯೆಗಳನ್ನು ಬಗೆಹರಿಸಿದರೆ ಉತ್ತಮ. -ರಮೇಶ ಬೈರಕಟ್ಟ, ಹಳೆ ವಿದ್ಯಾರ್ಥಿ, ವಾಲ್ಮೀಕಿ ಆಶ್ರಮ ಶಾಲೆ